ಏಕೆ ದೇಹವನು ದಂಡಿಸುವೆ ವೃಥಾ


ಏಕೆ ದೇಹವನು ದಂಡಿಸುವೆ ವೃಥಾ ಬಿಡ-
ದೇಕಚಿತ್ತದಿ ಲಕ್ಷ್ಮೀಕಾಂತ ಹರಿ ಎನ್ನದೆ

ಸ್ನಾನವನು ಮಾಡಿ ಧ್ಯಾನಿಸುವೆನೆನುತಲತಿ
ಮೌನವನು ಪಿಡಿದು ಬಕಪಕ್ಷಿಯಂತೆ
ಹೀನಬುದ್ದಿಗಳ ಯೋಚಿಸಿ ಕುಳಿತು ಫಲವೇನು
ದಾನವಾಂತಕನ ನಾಮಕೆ ಮೌನವುಂಟೆ?

ಜಪವ ಮಾಡುವೆನೆನುತ ಕಪಟಬುದ್ದಿಯ ಬಿಡದೆ
ಗುಪಿತದಿಂದಲಿ ನೀನು ಕುಳಿತು ಫಲವೇನು
ಅಪರಿಮಿತಮಹಿಮ ಶ್ರೀನಾರಾಯಣೆಂದರೆ
ಸಫಲವಲ್ಲದೆ ಬೇರೆ ಗತಿಯುಂಟೆ ಮರುಳೆ

ಅಂದಜಾಮಿಳಗೆ ಸ್ಮರಣೆಯ ಮಾತ್ರದಲಿ ಮುಕುತಿ
ಹಿಂದೆ ಶ್ರೀಹರಿಯು ತಾ ಕೊಡಲಿಲ್ಲವೇ?
ಸಂದೇಹವೇಕೆ ನೀನೊಂದು ಕ್ಷಣವಗಲದೆ
ತಂದೆ ಶ್ರೀಪುರಂದರವಿಠಲನ ನೆನೆ ಮನವೆ

No comments: