ಏಳೇಳು ಶರಧಿಯು ಏಕವಾಗಿದೆ ಕಂಡ್ಯ

ಏಳೇಳು ಶರಧಿಯು ಏಕವಾಗಿದೆ ಕಂಡ್ಯ 
ಹ್ಯಾಗೆ ಬಂದೆ ಹೇಳೊ ಕೋತಿ

ಏಳು ಶರಧಿಯು ಎನಗೆ ಏಳು ಕಾಲುವೆಯು
ತೂಳಿ ಲಂಘಿಸಿ ಬಂದೆ ಭೂತ

ಏಳು ಸಮುದ್ರದೊಳಿರುವ ಮಕರಿ ಮತ್ಸ್ಯ
ಹ್ಯಾಗೆ ಬಿಟ್ಟರು ಹೇಳೊ ಕೋತಿ
ಏಳು ಸಮುದ್ರದ ಮಕರಿ ಮತ್ಸ್ಯದ ಕೂಡೆ
ಮಾತಾಡಿ ಬಂದೆನೊ ಭೂತ

ಲಂಕಾದ್ವಾರದೊಳೊಬ್ಬ ಲಂಕಿಣಿ ಇರುವಳು
ಹ್ಯಾಂಗೆ ಬಿಟ್ಟಳು ಹೇಳೊ  ಕೋತಿ
ಲಂಕಿಣಿಯನು ಕೊಂದು ಶಂಕೆಯಿಲ್ಲದೆ ನಾನು
ಬಿಂಕದಿಂದಲಿ ಬಂದೆ ಭೂತ

ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರಿರೆ
ಹ್ಯಾಗೆ ಬಿಟ್ಟರು ಹೇಳೊ  ಕೋತಿ
ಕೊಂಬೆ ಕೊಂಬೆಗೆ ಕೋಟಿ ಮಂದಿ ರಾಕ್ಷಸರನ್ನು
ಕೊಂದ್ಹಾಕಿ ಬಂದೆನೊ ಭೂತ

ಯಾವೂರೊ ಎಲೊ ನೀನು ಯಾವ ಭೂಮಿಯೊ ನಿಂದು
ಯಾಕೆ ಬಂದೆ ಹೇಳೊ ಕೋತಿ
ಯಾವ ವನದೊಳಗೆ ಜಾನಕಿದೇವಿ ಇದ್ದಳೊ
ಅವಳ ನೋಡಬಂದೆ ಭೂತ

ದಕ್ಷಿಣಪುರಿ ಲಂಕಾ ದಾನವರಿಗಲ್ಲದೆ
ತ್ರ್ಯಕ್ಷಾದ್ಯರಿಗಳವಲ್ಲ ಕೋತಿ
ಪಕ್ಷಿಧ್ವಜ ರಾಮನ ಅಪ್ಪಣೆ ಎನಗಿಲ್ಲ
ಈ ಕ್ಷಣದಿ ತಪ್ಪಿಸಿಕೊಂಡೆ ಭೂತ

ದೂತನಾಗಿಹೆ ಎನ್ನ ಕೈಯೊಳು ಸಿಕ್ಕಿಹೆ
ಕೋಪವಿನ್ಯಾತಕೊ ಕೋತಿ
ನಾ ತಾಳಿಕೊಂಡಿಹೆನೊ ಈ ಕ್ಷಣದಿ ಲಂಕೆ
ನಿರ್ಧೂಮವನು ಮಾಳ್ಪೆ ಭೂತ

ನಿಮ್ಮಂಥ ದಾಸರು ನಿಮ್ಮರಸನ ಬಳಿ
ಎಷ್ಟು ಮಂದಿದ್ದಾರೊ ಕೋತಿ
ನನ್ನಂಥ ದಾಸರು ನಿನ್ನಂಥ ಹೇಡಿಗಳು
ಕೋಟ್ಯನುಕೋಟಿಯೊ ಭೂತ

ಎಲ್ಲಿಂದ ನೀ ಬಂದೆ ಏತಕೆಲ್ಲರ ಕೊಂಬೆ
ಯಾವರಸಿನ ಭಂಟ ಕೋತಿ
ಚೆಲ್ವಯೋಧ್ಯಾಪುರದರಸು ಜಾನಕಿಪತಿ
ರಾಮಚಂದ್ರನ ಭಂಟ ಭೂತ

ಸಿರಿ ರಾವಚಂದ್ರನು ನಿನ್ನರಸನಾದರೆ
ಆತ ಮುನ್ನಾರು ಹೇಳೊ ಕೋತಿ
ಹಿರಣ್ಯಕನನು ಸೀಳಿ ಪ್ರಹ್ಲಾದಗೊಲಿದ
ಶ್ರೀ ಪುರಂದರವಿಠಲನೊ ಭೂತ

No comments: