ಕೇಳೆನೊ ಹರಿ ತಾಳನೊ

ಕೇಳೆನೊ ಹರಿ ತಾಳನೊ

ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ

ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು
ಕೊಂಬು ಕೊಳಲು ಧ್ವನಿ ಸ್ವರಗಳಿದ್ದು
ತುಂಬುರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಡಂಭಕದ ಕೂಗಾಟ

ನಾನಾ ಬಗೆಯ ರಾಗ ಭಾವ ತಿಳಿದು ಸ್ವರ
ಜ್ಞಾನ ಮನೋಧರ್ಮ ಜಾತಿಯಿದ್ದು
ದಾನವಾರಿಯ ದಿವ್ಯನಾಮರಹಿತವಾದ
ಹೀನ ಸಂಗೀತ ಸಾಹಿತ್ಯಕ್ಕೆ ಮನವಿತ್ತು

ಅಡಿಗಡಿಗಾನಂದ ಬಾಷ್ಪಪುಳಕದಿಂದ
ನಡೆ ನುಡಿಗೆ ಶ್ರೀಹರಿಯೆನ್ನುತ
ದೃಢಭಕ್ತರನು ಕೂಡಿ ಹರಿಕೀರ್ತನೆ ಪಾಡಿ
ಕಡೆಗೆ ಪುರಂದರವಿಠಲನೆಂದರೆ ಕೇಳ್ವ

No comments: