ಜಯವದೆ ಜಯವದೆ ಈ ಮನೆತನಕೆ


ಜಯವದೆ ಜಯವದೆ ಈ ಮನೆತನಕೆ
ಬಿಡು ಬಿಡು ಬಿಡು ಬಿಡು ಮನ ಸಂಶಯವ
ಶಕುನೆಂಬಹಕ್ಕಿ ಹೇಳುತದಪ್ಪ
ಜಗವೆಂಬೋ ಗಿಡ ಹುಟ್ಟೈತಣ್ಣ
ಹಣ್ಣುಗಳೆರಡೂ ಐದಾವಪ್ಪ
ಮೂರು ಬುಡದ ಗಿಡ ಕೇಳಣ್ಣ
ಹಣ್ಣಿನ ಒಳಗೆ ನಾಲ್ಕು ರಸವು
ಐದು ದೊಡ್ಡ ಹರೆ ಕಾಣಪ್ಪ
ಆರು ಬಗೆಯ ಸ್ವರೂಪ ಕೇಳು
ಏಳು ಬಗೆಯ ತೊಗಟುಂಟಣ್ಣ
ಸಣ್ಣ ಗರಿಗಳು ಎಂಟೈದಾವೆ
ಅಕ್ಷವು ಇದಕೆ ಒಂಭತ್ತೈತೆ
ಎಲೆಗಳು ಹತ್ತು ಐದಾವಪ್ಪ
ಒಂದೇ ಹಕ್ಕಿ ಹಣ್ತಿಂತೈತೆ
ಮತ್ತೊಂದ್ಹಕ್ಕಿ ನೋಡುತದಪ್ಪ
ಹಣ್ತಿಂದ್ಹಕ್ಕಿ ಬಡವಾಗೈತೆ
ತಿನ್ನದ ಹಕ್ಕಿ ಬಲಿತೈತಣ್ಣ
ಸುಳ್ಳಲ್ಲ ನೀ ಕೇಳೋ ತಮ್ಮ
ದ್ವಾಸುಪರ್ಣದ ಶ್ರುತಿಯಲ್ಲೈತೆ
ಒಂದೇ ಕುಲದ ಹಕ್ಕಲ್ಲಣ್ಣ
ಒಂದೇ ಕುಲವೆಂದು ತಿಳಿಯಲಿ ಬೇಡ
ತಿಳಿದರೆ ನಿಮಗೆ ಕೇಡಾದೀತು
ಹಳೇ ವಸ್ತ್ರವ ಬಿಸಾಡಣ್ಣ
ಹೊಸ ವಸ್ತ್ರವ ನಿಮಗೆ ದೇವರು ಕೊಟ್ಯಾನು
ಹಕ್ಕಿಯರಸ ಆಡಿದ ಮಾತು
ಉತ್ತಮ ಮಾರ್ಗವ ಹಿಡಿಯೊ ತಮ್ಮಾ
ಮಾರ್ಗವ ಕಟ್ಟಿ ಸುಲಿಯುತ್ತಾರೆ
ಗಿರಿ ದುರ್ಗಂಗಳು ಐದಾವಪ್ಪ
ಮಾರನೆಂಬ ಕಳ್ಳೈದಾನೆ
ಸಮೀರನಾದರೆ ಹೊರಟೋಗ್ತಾನೆ
ಪುರಂದರನಾದರೆ ಬಿಡುವೊನಲ್ಲ
ಸುರಜೇಷ್ಠನ ಸಂಗತಿ ಹಿಡಿಯೋ ತಮ್ಮಾ
ಕಣ್ಣು ಮೂಗು ಕಿವಿ ನಾಲಿಗೆಯಪ್ಪ
ಒಂದೊಂದೊಬ್ಬರ ಕೊಂದಾವಣ್ಣ
ಕುರಂಗ ಮಾತಂಗ ಪತಂಗವು ಕೇಳೋ
ಭೃಂಗ ಮೀನಾ ಹತವಾದವಣ್ಣ
ಜ್ಞಾನ ಭಕ್ತಿಯೆಂಬ ಮಾರ್ಗವು ಎರಡು
ದೊಡ್ಡ ಮಾರ್ಗವ ಹಿಡಿಬೇಕಣ್ಣ
ದೊಡ್ಡ ಸಂಗತಿ ಬರುವೋತನಕ
ಎರಡೂ ಮನೆಯಲ್ಲಿರಬೇಕಣ್ಣ
ದಾನದ ಕೈಯ ತೋರಿಸಬೇಕು
ಅದರಿಂದ ನದಿಯ ದಾಟುತಿಯಪ್ಪ
ನಿನ್ನ ಯೋಗ್ಯತೆ ತಿಳಿದಮೇಲೆ
ಪುರಂದರವಿಠಲ ಸ್ಠಳ ಕೊಟ್ಟಾನು

No comments: