ಕೆಟ್ಟೆನಲ್ಲೋ ಹರಿಯೆ

ಕೆಟ್ಟೆನಲ್ಲೋ ಹರಿಯೆ

ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯಬೇಡ

ಬಂದೆನು ನಾ ತಂದೆ ತಾಯಿಗಳುದರದಿ
ಒಂದು ಅರಿಯದೆ ಬಾಲಕತನದೊಳು
ಮುಂದುವರಿದ ಯೌವನದೊಳು ಸತಿಸುತ-
ರಂದವ ನೋಡುತ ನಿನ್ನ ನಾ ಮರೆತೆನೊ

ಸ್ನಾನ ಸಂಧ್ಯಾವನವು ಹೀನವಾಯಿತು ಬಹು-
ಮಾನವಿಲ್ಲದೆ ಕುಲಹೀನರಾಶ್ರಯದಿಂದ
ಜ್ಞಾನಿಗಳೊಡನಾಟವಿಲ್ಲದೆ ಮನದೊಳು
ದಾನಧರ್ಮದ ಬಟ್ಟೆಗಾಣದೆ ಮರೆತೆನೊ

ಮೊದಲೆ ಬುದ್ಧಿಯು ಹೀನವದರೊಳು ವೃದ್ಧಾಪ್ಯ
ಕದನವು ದಶದಿಕ್ಕಿನುದಯದ ರಾಯರ
ಎದೆನೀರು ಬತ್ತಿತ್ತು ಅದರಿಂದ ನಿನ್ನಯ
ಪದಪದ್ಮಯುಗಳದ ತುದಿಯ ನಾ ಮರೆತೆನೊ

ಮೂಢನಾದೆನೊ ನಿನ್ನ ಬೇಡಿಕೊಳ್ಳದೆ ನಾನು
ಕಾಡೊಳಗಾಡುವ ಕಪಿಯಂತೆ ಜೀವಿಸಿ
ಗೂಡೊಳಗಿರುತಿಹ ಗೂಬೆಯ ತೆರನಂತೆ
ಮಾಡದೆ ನಿನ್ನಯ ಸ್ಮರಣೆಯ ಮರೆತೆನೊ

ಬುದ್ಧಿಹೀನನು ನಾನು ಉದ್ಧರಿಸೆಲೋ ದೇವ
ಮುದ್ದು ಶ್ರೀ ಪುರಂದರವಿಠಲನೆ ಎನ್ನ
ಬುದ್ಧಿಯೊಳಡಗಿದ್ದು ತಿದ್ದಿಟ್ಟು ನಡೆಸಯ್ಯ
ಪೊದ್ದುವೆ ನಿನ್ನಯ ಚರಣಾರವಿಂದವ

No comments: