ಕೃಷ್ಣ ಎನಬಾರದೆ

ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣ ಎನಬಾರದೆ

ಮಲಗೆದ್ದು ಮೈಮುರಿದು ಏಳುತಲೊಮ್ಮೆ 
ಕೃಷ್ಣ ಎನಬಾರದೆ 
ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ 
ಕೃಷ್ಣ ಎನಬಾರದೆ

ಸ್ನಾನ ಪಾನ ಜಪ ತಪಗಳ ಮಾಡುತ
ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ
ಕೃಷ್ಣ ಎನಬಾರದೆ

ಮೇರೆ ತಪ್ಪಿ ಮಾತನಾಡುವಗಲೊಮ್ಮೆ 
ಕೃಷ್ಣ ಎನಬಾರದೆ 
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ 
ಕೃಷ್ಣ ಎನಬಾರದೆ 

ಗಂಧವ ಪೂಸಿ ತಾಂಬೂಲವ ಮೆಲುವಾಗ
ಕೃಷ್ಣ ಎನಬಾರದೆ ತನ್ನ 
ಮಂದಗಮನೆ ಕೂಡ ಸರಸವಾಡುತಲೊಮ್ಮೆ 
ಕೃಷ್ಣಎನಬಾರದೆ

ಪರಿಹಾಸ್ಯದ ಮಾತನಾಡುತಲೊಮ್ಮೆ
ಕೃಷ್ಣ ಎನಬಾರದೆ 
ಪರಿ ಪರಿ ಕೆಲಸದೊಳೊಂದು ಕೆಲಸವೆಂದು 
ಕೃಷ್ಣ ಎನಬಾರದೆ

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೆ 
ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ 
ಕೃಷ್ಣ ಎನಬಾರದೆ

ನೀಗದಾಲೋಚನೆ ರೋಗೋಪದ್ರವದಲೊಮ್ಮೆ
ಕೃಷ್ಣ ಎನಬಾರದೆ
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ
ಕೃಷ್ಣ ಎನಬಾರದೆ

ದುರಿತರಾಶಿಗಳನು ತರಿದು ಬಿಸಾಡುವ
ಕೃಷ್ಣ ಎನಬಾರದೆ  
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ 
ಕೃಷ್ಣ ಎನಬಾರದೆ


ರಾಗ: ಸೌರಾಷ್ಟ್ರ – ಛಾಪು ತಾಳ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ



ಮೆಲ್ಲಮೆಲ್ಲನೆ ಬಂದನೆ

ಮೆಲ್ಲಮೆಲ್ಲನೆ ಬಂದನೆ ಗೋಪ್ಯಮ್ಮ ಕೇಳೆ

ಮೆಲ್ಲಮೆಲ್ಲನೆ ಬಂದನೆ

ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುದ್ದು ಕೊಟ್ಟು
ನಿಲ್ಲದೆ ಓಡಿ ಪೋದ ಕಳ್ಳಗೆ ಬುದ್ಧಿ ಪೇಳೆ

ಹಾಲು ಮಾರಲು ಪೋದರೆ ನಿನ್ನಯ ಕಂದ
ಕಾಲಿಗಡ್ಡವ ಕಟ್ಟಿದ
ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಗಟ್ಟಿ
ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ

ಮೊಸರು ಮಾರಲು ಪೋದರೆ ನಿನ್ನಯ ಕಂದ
ಹೆಸರೇನೆಂದೆಲೆ ಕೇಳಿದ
ಹಸನಾದ ಹೆಣ್ಣಿನ ಮೇಲೆ ಕುಸುಮವ ತಂದಿಕ್ಕಿ
ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ

ಹೋಗಿರೆ ರಂಗಯ್ಯನ ಮೇಲೆ ನೀವು
ದೂರೇನು ಕೊಂಡುಬಂದಿರೆ
ಯೋಗೀಶ ಪುರಂದರವಿಠಲರಾಯನ
ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ


ರಾಗ: ಮೋಹನ                ತಾಳ: ಆದಿ

ಮೂರ್ಖರಾದರು ಜನರು ಲೋಕದೊಳಗೆ

 ಮೂರ್ಖರಾದರು ಜನರು ಲೋಕದೊಳಗೆ

ಏಕ ದೈವವ ಬಿಟ್ಟು ಕಾಕು ದೈವವ ಭಜಿಸಿ

ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ
ನೆಂಟರಿಗೆ ಸಾಲವನು ಕೊಡುವಾತ ಮೂರ್ಖ
ಗಂಟನೊಬ್ಬರ ಕೈಯಲಿಡುವಾತ ಮೂರ್ಖ ಜನ-
ಕಂಟಕನಾದವನು ಕಡು ಮೂರ್ಖನಯ್ಯ

ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ
ಬಡತನವು ಬಂದಾಗ ಬೈದುಕೊಂಬುವ ಮೂರ್ಖ
ದೃಢಭಕ್ತಿಯಿಲ್ಲದವ ಕಡು ಮೂರ್ಖನಯ್ಯ

ಮುಪ್ಪಿನಲಿ ಮದುವೆ ಮಾಡಿಕೊಂಬುವವ ಮೂರ್ಖ
ಸರ್ಪನಲಿ ಸರಸವಾಡುವನೆ ಮೂರ್ಖ
ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪ ರಂಗಯ್ಯನ ಭಜಿಸದವ ಮೂರ್ಖನಯ್ಯ

ಸತ್ತ ಕುರುವಿನ ತಾಯ ಹಾಲ ಕರೆವವ ಮೂರ್ಖ
ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ
ಹತ್ತೆಂಟು ಬಗೆಯಲ್ಲಿ ಹಂಬಲಿಸುವವ ಮೂರ್ಖ
ಹೆತ್ತ ತಾಯಿಯ ಬೈವ ಕಡೂ ಮೂರ್ಖನಯ್ಯ

ರಾಮನಾಮವ ನಂಬಿ ಭಜಿಸದಿದ್ದವ ಮೂರ್ಖ
ಹೇಮವನು ಗಳಿಸಿ ಉಣದವನು ಮೂರ್ಖ
ಕಾಮದಲಿ ಹಿರಿಯಳ ಕೂಡಿಕೊಂಡವ ಮೂರ್ಖ
ಭೂಮಿ ದಾನವ ತೆಗೆವ ಭೂಪತಿಯು ಮೂರ್ಖ

ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖ
ಭೂಸುರರಿಗನ್ನವನು ಕೂಡದವನು ಮೂರ್ಖ
ಶೇಷಗಿರಿ ಕೃಷ್ಣನ್ನ ಭಜಿಸದಿದ್ದವ ಮೂರ್ಖ
ದಾಸನಾಗದ ಮನುಜ ಕಡು ಮೂರ್ಖನಯ್ಯ

ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖ
ಕೊಂಡೆ ಮಾತನು ಕೇಳಿ ಕುಣಿವವನು ಮೂರ್ಖ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ಕಂಡು ಕಂಡು ಭಜಿಸದವ ಕಡು ಮೂರ್ಖನಯ್ಯ



ರಾಗ: ಮುಖಾರಿ     ತಾಳ: ಝಂಪೆ

ಮೂರುತಿಯನು ನಿಲ್ಲಿಸೊ ಮಾಧವ ನಿನ್ನ

ಮೂರುತಿಯನು ನಿಲ್ಲಿಸೊ ಮಾಧವ ನಿನ್ನ

ಎಳೆ ತುಳಸಿಯ ವನಮಾಲೆಯು ಕೊರಳೊಳು
ಪೊಳೆವ ಪೀತಾಂಬರದಿಂದಲೊಪ್ಪುವ ನಿನ್ನ

ಮುತ್ತಿನ ಸರ ನವರತ್ನದುಂಗುರವಿಟ್ಟು
ಮತ್ತೆ ಶ್ರೀ ಲಕ್ಷ್ಮಿಯು ಉರದೊಳೊಪ್ಪುವ ನಿನ್ನ

ಭಕ್ತ ಕಲ್ಪತರು ಭಾಗ್ಯದ ಸುರಧೇನು
ಮುಕ್ತಿದಾಯಕ ಪುರಂದರವಿಠಲ ನಿನ್ನ


ರಾಗ: ಕಮಾಚು       ತಾಳ: ಆದಿ

ಮೂಢ ಬಲ್ಲನೆ ಜ್ಞಾನ ದೃಢಭಕ್ತಿಯ

ಮೂಢ ಬಲ್ಲನೆ ಜ್ಞಾನ ದೃಢಭಕ್ತಿಯ
ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ

ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು
ಗೋಣಿ ಬಲ್ಲುದೆ ಎತ್ತಿನ ದುಃಖವ
ಪ್ರಾಣ ತೊಲಗಿದ ದೇಹ ಕಿಚ್ಚೆಂದು ಬಲ್ಲುದೆ
ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ

ಬಧಿರ ಬಲ್ಲನೆ ಸುಸಂಗೀತ ಸ್ವಾರಸ್ಯವನು
ಚದುರನುಡಿಯಾಡಬಲ್ಲನೆ ಮೂಕನು
ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿದಪನೆ
ಮಧುರ ವಚನವ ಬಲ್ಲನೆ ದುಷ್ಟ ಮನುಜ

ಅಜ ಬರೆದ ಬರಹವನು ತೊಳೆಯಬಲ್ಲನೆ ಜಾಣ
ನಿಜಭಕ್ತಿ ಮುಕ್ತಿ ಸುಖವನು ಕೊಡುವ
ಭುಜಗೇಂದ್ರಶಯನ ಸಿರಿಪುರಂದರವಿಟ್ಠಲನ
ಭಜಿಸಲರಿಯದವ ಬಲ್ಲನೆ ಮುಕ್ತಿ ಸುಖವ



ರಾಗ: ಮುಖಾರಿ     ತಾಳ: ಝಂಪೆ

ಮುಸುರೆ ತೊಳೆಯಬೇಕು

ಮುಸುರೆ ತೊಳೆಯಬೇಕು ಈ ಮನಸಿನ
ಮುಸುರೆ ತೊಳೆಯಬೇಕು

ಮುಸುರೆ ತೊಳೆಯಬೇಕು ಗುಸುಗುಸು ಬಿಡಬೇಕು
ಈಶ ಪ್ರೇರಣೆಯೆಂಬೊ ಹಸಿಯ ಹುಲ್ಲನು ಹಾಕಿ

ಅಷ್ಟ ಮದದಿಂದ ಸುಟ್ಟ ಈ ಪಾತ್ರೆಯ
ವಿಷ್ಣುನಾಮವೆಂಬೊ ಕೃಷ್ಣಾನದಿಯಲ್ಲಿ

ಕಾಮಕ್ರೋಧದಿಂದ ಬೆಂದ ಈ ಪಾತ್ರೆಯ
ರಾಮಕೃಷ್ಣರೆಂಬೊ ಹೇಮಾನದಿಯಲ್ಲಿ

ವಿಷವೆಂಬೊ ಪಾತ್ರೆಯ ಮುಸುರೆ ತೊಳೆದಿಟ್ಟು
ಬಿಸಜಾಕ್ಷ ಪುರಂದರವಿಠಲಗರ್ಪಿಸೊ ನಿತ್ಯ


ರಾಗ: ಧನ್ಯಾಸಿ    ತಾಳ: ಮಟ್ಟ

ಮುಯ್ಯಕ್ಕೆ ಮುಯ್ಯ ತೀರಿತು

ಮುಯ್ಯಕ್ಕೆ ಮುಯ್ಯ ತೀರಿತು ಜಗ-
ದಯ್ಯ ವಿಜಯ ಸಹಾಯ ಪಂಢರಿರಾಯ

ಸಣ್ಣವನೆಂದು ನಾ ನೀರು ತಾರೆಂದರೆ
ಬೆಣ್ಣೆಗಳ್ಳ ಕೃಷ್ಣ ಮರುಳು ಮಾಡಿ
ಚಿನ್ನದ ಗಿಂಡಿಲಿ ನೀರು ತಂದಿತ್ತರೆ
ಕಣ್ಣು ಕಾಣದೆ ನಾ ಠೊಣೆದೆ ಪಂಢರಿರಾಯ

ಎನ್ನ ಹೆಸರ ಹೇಳಿ ಸೂಳೆಗೆ ಕಂಕಣ-
ವನ್ನು ನೀನೆ ಕೊಟ್ಟು ನಿಜವ ಮಾಡಿ
ಎನ್ನ ಪಿಡಿಸಿ ಪರಮ ಭಂಡನ್ನ ಮಾಡಿ
ನಿನ್ನ ಮುಯ್ಯಕ್ಕೆ ಮುಯ್ಯ ತೋರಿದೆ ಪಂಢರಿರಾಯ

ಭಕ್ತವತ್ಸಲನೆಂಬ ಬಿರುದು ಬೇಕಾದರೆ
ಭಕ್ತರಾಧೀನರಾಗಿರಬೇಡವೆ
ಯುಕ್ತಿಯಲಿ ನಿನ್ನಂಥ ದೇವರ ನಾ ಕಾಣೆ
ಮುಕ್ತೀಶ ಪುರಂದರವಿಠಲ ಪಂಢರಿರಾಯ



ರಾಗ: ಪಂತುವರಾಳಿ         ತಾಳ: ಛಾಪು

ಮುಪ್ಪಿನ ಗಂಡನ ಒಲ್ಲೆನೆ

ಮುಪ್ಪಿನ ಗಂಡನ ಒಲ್ಲೆನೆ
ತಪ್ಪದೆ ಪಡಿಪಾಟ ಪಡಲಾರೆನವ್ವ

ಉದಯದಲೇಳಬೇಕು ಉದಕ ಕಾಸಲು ಬೇಕು
ಹದನಾಗಿ ಬಜೆಯನು ಅರೆದಿಡಬೇಕು
ಬದಿಯಲಿ ಎಲೆಅಡಿಕೆ ಕುಟ್ಟಿಡಬೇಕು
ಬಿದಿರಕೋಲು ತಂದು ಮುಂದಿಡಬೇಕು

ಪಿತ್ತವೋಕರಿಕೆ ಮುದುಕರಿಗೆ ವಿಶೇಷವು
ಹೊತ್ತುಹೊತ್ತಿಗೆ ಜೊಲ್ಲ ಚೆಲ್ಲಬೇಕು
ಮೆತ್ತನವೆರಡು ಮುದ್ದಿಯ ಮಾಡಲು ಬೇಕು
ಒತ್ತೊತ್ತಿ ಕೂಗಿ ಕರೆಯಲುಬೇಕು

ಜಾಡಿ ಹಾಸಬೇಕು ನೋಡಿ ಬಾಡಬೇಕು
ಅಡಿಗಡಿಗೆ ಕಣ್ಣೀರ ಸುರಿಸಬೇಕು
ಒಡೆಯ ಶ್ರೀಪುರಂದರವಿಠಲನ ನೆನೆಯುತ
ಮಿಡಿಗೊಂಡ ಮೂಲೆಗೆ ಒರಗಬೇಕು



ರಾಗ: ಆನಂದಭೈರವಿ              ತಾಳ: ಅಟ್ಟ

ಮುತೈದೆಯಾಗಿರಬೇಕು ಮುದದಿಂದಲಿ

ಮುತೈದೆಯಾಗಿರಬೇಕು ಮುದದಿಂದಲಿ

ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು

ಗುರುವಿಂದ ಶಾಸ್ತ್ರವನು ಓದುವುದೆ ಮಾಂಗಲ್ಯ
ವೈರಾಗ್ಯವೆಂಬುದೆ ಒಪ್ಪುವ ಮೂಗುತಿ
ತಾರತಮ್ಯಜ್ಞಾನ ತಾಯಿತ್ತು ಮುತ್ತು ಸರ
ಕರುಣರಸವೆಂಬಂಥ ಕಟ್ಟಾಣಿ ಕಟ್ಟಿಕೊಂಡು

ಹರಿಕಥೆಯ ಕೇಳುವುದು ಕಿವಿಗೆ ಮುತ್ತಿನ ಓಲೆ
ನಿರುತ ಸತ್ಕರ್ಮವು ನಿಜ ಕಾಂತಿಯು
ಪರಮ ಭಕ್ತರ ಪಾದರಜ ಹೆರಳು ಬಂಗಾರ
ಗುರು ಭಕುತಿಯೆಂಬಂಥ ಗಂಧ ಕುಂಕುಮ ಧರಿಸಿ

ಪೊಡವಿಯೊಳು ಪರಹಿತದ ಪಟ್ಟವಾಳಿಯನುಟ್ಟು
ಕೊಡುವ ಧರ್ಮವೆಂಬ ಕುಬುಸ ತೊಟ್ಟು
ಬಿಡದೆ ಎನ್ನೊಡೆಯ ಶ್ರೀ ಪುರಂದರವಿಟ್ಠಲನ
ಧೃಡ ಭಕುತಿ ಎಂಬಂಥ ಕಡಗ ಬಳೆ ಇಟ್ಟುಕೊಂಡು



ರಾಗ: ಕಾಂಬೋದಿ   ತಾಳ: ಅಟ್ಟ

ಮುತ್ತು ಕೊಳ್ಳಿರೋ ಜನರು

ಮುತ್ತು ಕೊಳ್ಳಿರೋ ಜನರು
ಮುತ್ತು ಕೊಳ್ಳಿರೊ

ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ

ಜ್ಞಾನವೆಂಬೋ ದಾರದಲಿ
ಪೋಣಿಸಿದ ದಿವ್ಯ ಮುತ್ತು
ಜ್ಞಾನದಿಂದ ಕೊಂಬುದಿದನು
ದೀನರಾದ ಭಕ್ತ ಜನರು

ಕಟ್ಟಲಾಗದು ಮೂಗಿನಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟ ಜನಕೆ ಕಾಣಿಸದಂಥ
ಕೃಷ್ಣನೆಂಬೊ ಅಣಿಮುತ್ತು

ಹಿಡಿಯಲಿಕ್ಕೆ ನಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೊ ದಿವ್ಯ ಮುತ್ತು


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
ರಾಗ: ಪಂತುವರಾಳಿ    ತಾಳ: ಆದಿ

ಮಾನಹೀನನಿಗೆ ಅಭಿಮಾನವೇಕೆ

ಮಾನಹೀನನಿಗೆ ಅಭಿಮಾನವೇಕೆ

ಜ್ಞಾನವಿಲ್ಲದವಂಗೆ ಗುರುಭೋಧೆಯೇಕೆ

ಕಾಡು ತಿರುಗುವಗೆ ಕನಕಭೂಷಣವೇಕೆ
ಓಡೊಳಗೆ ತಿರುಗುವಗೆ ಕನಕಭೂಷಣವೇಕೆ
ಬೇಡಿದರೆ ಕೊಡದಿಹಗೆ ಕಡು ಬಿಂಕತನವೇಕೆ
ಪಾಡಲರಿಯದವಂಗೆ ಪ್ರೌಢತನವೇಕೆ

ಅಂಬಲಿಯನುಂಬುವಗೆ ಅಮೃತಾನ್ನ ತಾನೇಕೆ
ಕಂಬಳಿ ಹೊದೆದವಗೆ ಮಡಿಯೇತಕೆ
ಡೊಂಬಾಟವಿಕ್ಕುವಗೆ ಗಂಭೀರತನವೇಕೆ
ಹಂಬಲನು ಬಿಡದವಗೆ ಹರಿನಾಮವೇಕೆ

ಭೂಸುರರ ಕೊಲುವವಗೆ ಭೂರಿ ಧರ್ಮಗಳೇಕೆ
ಭಾಷೆಗೆಟ್ಟವನಿಗೆ ನಂಬುಗೆಯದೇತಕೆ
ಕ್ಲೇಶ ಒಡಲೊಳಗಿರಲು ತೀರ್ಥಯಾತ್ರೆಗಳೇಕೆ
ಆಸೆ ಬಿಡದಿದ್ದವಗೆ ಸನ್ಯಾಸವೇಕೆ

ಮಿತಿ ಮೀರಿ ನಡೆವವಗೆ ವ್ರತ ನೇಮಗಳು ಏಕೆ
ಸತಿಗೆ ಅಳುಕುವನ ಸಾಹಸವು ಏಕೆ
ಮತಿ ಶುದ್ಧಿಯಿಲ್ಲದ ಮಂತ್ರ ತಂತ್ರಗಳೇಕೆ
ಗತಿಯ ಚಿಂತಿಸದವನ ವಿಪ್ರತ್ವವೇಕೆ

ಸಾಮಾನ್ಯನಿಗೆ ಸಾರ್ವಭೌಮ ಪದವಿಯದೇಕೆ
ಪ್ರೇಮವಿಲ್ಲದ ಬಂಧುಜನವೇತಕೆ
ಸ್ವಾಮಿ ಶ್ರೀ ಪುರಂದರವಿಟ್ಠಲನ ನೆನೆಯದಿಹ
ತಾಮಸಾಧಮನಿಗೆ ಕೈವಲ್ಯವೇಕೆ


ರಾಗ: ಕಾಂಬೋದಿ   ತಾಳ: ಅಟ್ಟ

ಮಾತಿಗೆ ಬಾರದ ವಸ್ತು ಬಹಳಿದ್ದರೇನು

ಮಾತಿಗೆ ಬಾರದ ವಸ್ತು ಬಹಳಿದ್ದರೇನು
ಹೋತಿನ ಕೊರಳೊಳಗೆ ಮೊಲೆ ಇದ್ದರೇನು

ತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು
ದಾನವಿಲ್ಲದ ಮನೆಯು ದೊಡ್ಡದಾದರೇನು
ಹೀನ ಗುಣವುಳ್ಳವಗೆ ಹಿರಿಯತನ ಬಂದರೇನು
ಶ್ವಾನನ ಮೊಲೆಯೊಳಗೆ ಹಾಲಿದ್ದರೇನು

ಆದರಿಲ್ಲದ ಊಟ ಅಮೃತಾನ್ನವಿದ್ದೇನು
ವಾದಿಸುವ ಸತಿಸುತರು ಇದ್ದು ಫಲವೇನು
ಕ್ರೋಧವನು ಮಾಡುವ ಸಹೋದರರು ಇದ್ದರೇನು
ಮಾದಿಗರ ಮನೆಯಲ್ಲಿ ಮದುವ್ಯಾದರೇನು

ಹೋಗದೂರಿನ ದಾರಿ ಕೇಳಿ ಮಾಡುವುದೇನು
ಯೋಗಿಯ ಕೂಡ ಪರಿಹಾಸ್ಯವೇನು
ರಾಗದಲಿ ಪುರಂದರವಿಠಲನ್ನ ನೆನೆಯದವ
ಯೋಗಿಯಾದರೇನವನು ಭೋಗಿಯಾದರೇನು


ರಾಗ: ಕಾಂಬೋದಿ   ತಾಳ: ಝಂಪೆ

ಮಾಡು ಸಿಕ್ಕದಲ್ಲಾ

ಮಾಡು ಸಿಕ್ಕದಲ್ಲಾ
ಮಾಡಿನ ಗೂಡು ಸಿಕ್ಕದಲ್ಲಾ
ಜೋಡು ಹೆಂಡಿರಂಜಿ
ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲ

ಎಚ್ಚರಗೊಳಲಿಲ್ಲಾ ಮನವೇ
ಹುಚ್ಚನಾದೆನಲ್ಲಾ
ಅಚ್ಚಿನೊಳಗೆ ಮೆಚ್ಚು
ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲಾ

ಮುಪ್ಪು ಬಂದಿತಲ್ಲಾ ಪಾಯಸ
ತಪ್ಪದೆ ಉಣಲಿಲ್ಲಾ
ತುಪ್ಪದ ಬಿಂದಿಗೆ
ತಿಪ್ಪೆಯ ಮೇಲೆ
ಧೊಪ್ಪನೆ ಬಿತ್ತಲ್ಲಾ

ಯೋಗವು ಬಂತಲ್ಲಾ ಬದುಕು ವಿ-
ಭಾಗವಾಯಿತಲ್ಲ್ಲಾ
ಭೋಗಿಶಯನ ಶ್ರೀ
ಪುರಂದರವಿಠಲನ
ಆಗ ನೆನೆಯಲಿಲ್ಲಾ


 ರಾಗ: ಪಂತುವರಾಳಿ    ತಾಳ: ಆದಿ

ಮಲವ ತೊಳೆಯಬಲ್ಲರಲ್ಲದೆ

ಮಲವ ತೊಳೆಯಬಲ್ಲರಲ್ಲದೆ
ಮನವ ತೊಳೆಯಬಲ್ಲರೆ

ಹಲವು ತೀರ್ಥಂಗಳಲಿ ಮುಳುಗಿ
ಹಲುಬಿದರೆ ಫಲವೇನು

ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ-
ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ

ಯೋಗಿಯಂತೆ ಜನರು ಮೆಚ್ಚುವಂತೆ ಹೋಗಿ ನೀರಿನಲ್ಲಿ
ಕಾಗೆಯಂತೆ ಮುಳುಗೆ ಮಾಘಸ್ನಾನ ಫಲವು ಬಾಹೋದೆ

ಪರರ ಕೇಡು ಬಯಸಿ ಗುರುಹಿರಿಯರನ್ನು ನಿಂದಿಸುತ್ತ
ಪರಮಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ್ತ
ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ
ಹರಿವ ನೀರಿನ ತೀರದಿ ಕುಳಿತರೇನು ಬಕ ಧ್ಯಾನದಿ

ಕಾಸುವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿ
ದೇಶದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು
ಆಶಾಪಾಶ ಬಿಡದೆ ಮನಸು ಹೇಸಿ ವಿಷಯ ಬಯಸುವಂಥ
ವೇಷಧಾರಿಗಳಿಗೆ ಕಾಶಿಯಾತ್ರೆ ಫಲವು ಬಾಹೋದೆ

ತಂದೆತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ
ಮಂದಗಮನೆರೊಡನೆ ಆನಂದದಿಂದಲಿರುವನು
ತಂದೆ ಸತ್ತಮೇಲೆ ನೂರುಮಂದಿ ವಿಪ್ರರಿಗುಣಿಸಿ ತಮ್ಮ
ತಂದೆ ತೃಪ್ತನಾದನೆಂಬರು ಮಂದಮತಿಯ ಜನಗಳು

ಏನು ಓದಲೇನು ಫಲ ಏನು ಕೇಳಲೇನು ಫಲ
ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಯಾಕೆ ಹೀನಚಿತ್ತನಾದ ಮೇಲೆ
ಶ್ರೀನಿವಾಸ ಪುರಂದರವಿಠಲನು ಮೆಚ್ಚುವನೆ ಮರುಳೆ



ರಾಗ: ಕಾಪಿ (ಸುವ್ವಿಮಟ್ಟು)     ತಾಳ: ಏಕ

ಮನೆಯೊಳಗಾಡೊ ಗೋವಿಂದ

ಮನೆಯೊಳಗಾಡೊ ಗೋವಿಂದ ನೆರೆ-
ಮನೆಗಳಿಗೇಕೆ ಪೋಗುವೆಯೊ ಮುಕುಂದ

ನೊಸಲಿಗೆ ತಿಲಕವನಿಡುವೆ ಅಚ್ಚ
ಹೊಸ ಬೆಣ್ಣೆಯನಿಟ್ಟು ಕಜ್ಜಾಯ ಕೊಡುವೆ
ಹೊಸತಾಭರಣವನಿಡುವೆ ಹೊನ್ನ
ಮಿಸುಣಿ ನಿನ್ನನು ನೋಡಿ ಸಂತೋಷಪಡುವೆ

ಅಣ್ಣಯ್ಯ ಬಲರಾಮ ಸಹಿತ ನೀ-
ನಲ್ಲಲ್ಲಿ ತಿರುಗಾಡಿ ಬಾಹೋದೆ ವಿಹಿತ
ಹೆಣ್ಣುಗಳ್ಯಾಕೋ ಸಂಗಾತ ಎನ್ನ
ಬಿನ್ನಪವನು ಪರಿಪಾಲಿಸೊ ದಾತ

ಚೋರನೆನಿಸಿಕೊಳಲೇಕೆ ಶ್ರೀಮ-
ನ್ನಾರಾಯಣನಿಗೆ ದೂರುಗಳೇಕೆ
ವಾರಿಜಾಕ್ಷೇರ ಕೂಟವೇಕೆ ಪುರಂ-
ದರವಿಠಲ ವಾಕು ಕೇಳೆಚ್ಚರಿಕೆ



ರಾಗ: ಪಂತುವರಾಳಿ    ತಾಳ: ಅಟ್ಟ

ಮನುಜ ಶರೀರವಿದೇನು ಸುಖ

ಮನುಜ ಶರೀರವಿದೇನು ಸುಖ ಇದ
ನೆನೆದರೆ ಘೋರವಿದೇನು ಸುಖ

ಜನನ ಮರಣ ಮಲದ ಕೂಪದಲ್ಲಿದ್ದು
ಅನುಭವಿಸುವುದು ಇದೇನು ಸುಖ
ತನುವಿದ್ದಾಗಲೆ ಹೃದಯದ ಶೌಚದ
ಸ್ತನಗಳನುಂಬುವುದೇನು ಸುಖ

ದಿನ ದಿನ ಹಸಿವು ತೃಷೆ ಘನ ಘನ ರೋಗದೊ-
ಳನುಭವಿಸುವುದೇನು ಸುಖ
ನೆನೆಯಲನಿತ್ಯ ನೀರ್ಗುಳ್ಳೆಯಂತಿರುತಿಪ್ಪ
ತನು ಮಲ ಭಾಂಡವಿದೇನು ಸುಖ

ಪರಿ ಪರಿ ವಿಧದಲಿ ಪಾಪವ ಗಳಿಸುತ
ನರಕಕೆ ಬೀಳುವದೇನು ಸುಖ
ಪುರಂದರವಿಠಲನ ಮನದಿ ನೆನೆದು ಸ-
ದ್ಧರ್ಮದಿ ನಡೆದರೆ ಆಗ ಸುಖ



ರಾಗ: ಶಂಕರಾಭರಣ   ತಾಳ: ಆದಿ

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು

ಮನ ಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನು ಶುದ್ಧಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಮೀನುಮೊಸಳೆಯಂತೆ
ನಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತಿದ್ದ ಪುರಂದರವಿಠಲ