
ಸುಂದರ ಮೃಗವರ ಪಿನಾಕಧನುಕರ ಗಂಗಾತೀರ ಗಜಚರ್ಮಾಂಬರಧರ
ನಂದಿವಾಹನಾನಂದದಿಂದ ಮೂರ್ಜಗದಿ ಮೆರೆವ ನೀನೆ
ಅಂದು ಅಮೃತ ಘಟದಿಂದುದಿಸಿದ ವಿಷ ತಂದು ಭುಜಿಸಿದವ ನೀನೆ
ಕಂದರ್ಪನ ಕ್ರೋಧದಿಂದ ಕಣ್ತೆರೆದು ಕೊಂದ ಉಗ್ರ ನೀನೆ
ಇಂದಿರೇಶ ಶ್ರೀರಾಮನ ಪಾದವ ಚಂದದಿ ಪೊಗಳುವ ನೀನೆ
ಬಾಲಮೃಕಂಡಜನ ಕಾಲನು ಎಳೆವಾಗ ಪಾಲಿಸಿದವ ನೀನೆ
ವಾಲಯದಿ ಕಪಾಲ ಪಿಡಿದು ಭಿಕ್ಷೆ ಬೇಡೋ ದಿಗಂಬರ ನೀನೆ
ಕಾಲಕೂಟವನು ಪಾನಮಾಡಿದ ನೀಲಕಂಠನು ನೀನೆ
ಜಾಲಮಾಡಿದ ಗೋಪಾಲನೆಂಬ ಪೆಣ್ಣಿಗೆ ಮರುಳಾದವ ನೀನೆ
ಧರೆಗೆ ದಕ್ಷಿಣ ಕಾವೇರಿತೀರ ಕುಂಭಪುರವಾಸನು ನೀನೆ
ಕೊರಳೊಳು ರುದ್ರಾಕ್ಷಿ ಭಸ್ಮವ ಧರಿಸಿದ ಪರಮ ವೈಷ್ಣವ ನೀನೆ
ಕರದಲಿ ವೀಣೆಯ ನುಡಿಸುವ ನಮ್ಮ ಉರಗಭೂಷಣನು ನೀನೆ
ಗರುಡಗಮನ ಶ್ರೀ ಪುರಂದರವಿಠಲಗೆ ಪ್ರಾಣಪ್ರಿಯನು ನೀನೆ
No comments:
Post a Comment