
ಜೋ ಜೋ ಗೋಪಿಯ ಕಂದ
ಮುಕುಂದ ಜೋ ಜೋ
ಪಾಲಗಡಲೊಳು ಪವಡಿಸಿದವನೆ
ಆಲದೆಲೆಯ ಮೇಲೆ ಮಲಗಿದ ಶಿಶುವೆ
ಶ್ರೀಲತಾಂಗಿಯಳ ಚಿತ್ತದೊಲ್ಲಭನೆ
ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ
ಹೊಳೆವಂಥ ರನ್ನದ ತೊಟ್ಟಿಲ ಮೇಲೆ
ಥಳಥಳಿಸುವ ಗುಲಗಂಜಿಯ ಮಾಲೆ
ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ
ನಳಿನನಾಭನೆ ನಿನ್ನ ಪಾಡಿ ತೂಗುವೆನಯ್ಯ ಜೋ ಜೋ
ಯಾರ ಕಂದ ನೀನಾರ ನಿಧಾನಿ
ಯಾರ ರತ್ನವೊ ನೀನಾರ ಮಾಣಿಕವೊ
ಸೇರಿತು ಎನಗೊಂದು ಚಿಂತಾಮಣಿಯೆಂದು
ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋ ಜೋ
ಗುಣನಿಧಿಯೆ ನಿನ್ನನೆತ್ತಿಕೊಂಡಿದ್ದರೆ
ಮನೆಯ ಕೆಲಸವಾರು ಮಾಡುವರಯ್ಯ
ಮನಕೆ ಸುಖನಿದ್ರೆಯ ತಂದುಕೊ ಬೇಗ
ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋ ಜೋ
ಅಂಡಜವಾಹನ ಅನಂತಮಹಿಮ
ಪುಂಡರೀಕಾಕ್ಷ ಶ್ರೀ ಪರಮಪಾವನ್ನ
ಹಿಂಡು ದೈವದ ಗಂಡ ಉದ್ದಂಡನೆ
ಪಾಂಡುರಂಗ ಶ್ರೀ ಪುರಂದರವಿಠಲ ಜೋ ಜೋ
No comments:
Post a Comment