ಏತರ ಚೆಲುವ ರಂಗಯ್ಯ
ಹರಿಯೆಂಬ ಮಾತಿಗೆ ಮರುಳಾದೆನಲ್ಲದೆ
ದೇಶಕೋಶಗಳುಳ್ಳೊಡೆ ತಾ ಕ್ಷೀರವಾ
ರಾಶಿಯೊಳಗೆ ಮನೆ ಕಟ್ಟುವನೆ
ಹಾಸುವುದಕೆ ಹಾಸಿಗೆಯುಳ್ಳೊಡೆ ತಾ
ಶೇಷನ ಬೆನ್ನಲಿ ಮಲಗುವನೆ ರಂಗ
ಬುದ್ದಿಯ ಪೇಳುವ ಪಿತನುಳ್ಳೊಡೆ ಬೆಣ್ಣೆ
ಕದ್ದು ಚೋರನೆಂದೆನಿಸುವನೆ
ಬದ್ಧವಾಹನ ತನಗಿದ್ದರೆ ಹಾರುವ
ಹದ್ದಿನ ಮೇಲೇರಿ ತಿರುಗುವನೆ ರಂಗ
ಹಡೆದ ತಾಯಿ ತನಗುಳ್ಳೊಡೆ ಗೋಪರ
ಒಡಗೂಡಿ ತುರು ಹಿಂಡು ಕಾಯುವನೆ
ಮಡದಿಯು ಉಳ್ಳೊಡೆ ಅಡವಿಯೊಳಾಡುವ
ಹುಡುಗಿಯರ ಸಂಗ ಮಾಡುವನೇ ರಂಗ
ಸಂಗಡ ಉದಿಸಿದ ಅಣ್ಣನಿದ್ದರೆ ನರ-
ಸಿಂಗನ ರೂಪವ ಧರಿಸುವನೆ
ಅಂಗದ ಮೇಲಿನ ಆಸೆಯಿದ್ದೊಡೆ ಕಾ-
ಳಿಂಗನ ಮಡುವಿಲಿ ಧುಮುಕುವನೆ ರಂಗ
ಸಿರಿಯುಳ್ಳೊಡೆ ಪೋಗಿ ಬಲಿಯ ಬಾಗಿಲ ಕಾಯ್ದು
ಧರೆಯ ದಾನಕೆ ಕೈ ಒಡ್ಡುವನೆ
ದೊರೆಯು ತಾನಾದರೆ ಪಾಂಡುಕುಮಾರನ
ತುರಗ ಬಂಡಿಯ ಬೋವನಾಗುವನೆ ರಂಗ
ಮದನಜನಕ ತಾನು ಸೊಬಗುಳ್ಳನಾದರೆ
ಮುದುಕಿ ಕುಬುಜೆಯನು ಕೂಡುವನೆ
ಮುದದಿ ತಾ ಪರದೈವವೆನಿಸಿಕೊಂಡ
ಚದುರ ಶೀ ಪುರಂದರವಿಠಲ ಅಮ್ಮಮ್ಮ
No comments:
Post a Comment