ಸತ್ಯ ಜಗತಿದು - Satya jagattidu

ಸತ್ಯ ಜಗತಿದು ಪಂಚಭೇದವು ನಿತ್ಯ ಶ್ರೀ ಗೋವಿಂದನ
ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕವೆಂದು ಸಾರಿರೈ

ಜೀವ ಈಶಗೆ ಭೇದ ಸರ್ವತ್ರ ಜೀವ ಜೀವಕೆ ಭೇದವು
ಜೀವ ಜಡಕೆ ಜಡ ಜಡಕೆ ಭೇದ ಜೀವಜಡ ಪರಮಾತ್ಮಗೆ

ಮಾನುಷೋತ್ತಮರಧಿಕ ಕ್ಷಿತಿಪರು ಮನುಜ ದೇವ ಗಂಧರ್ವರು
ಜಾನಪಿತರಜಾನಜ ಕರ್ಮರು ಉಕ್ತ ಶೇಷ ಶತಸ್ಥರು

ಗಣಪಮಿತ್ರರು ಸಪ್ತಋಷಿಗಳು ವಹ್ನಿ ನಾರದ ವರುಣರು
ಇನಜಗೆ ಸಮ ಚಂದ್ರ ಸೂರ್ಯರು ಮನುಸತಿಯು ಹೆಚ್ಚು ಪ್ರವಹನು

ದಕ್ಷ ಸಮ ಅನಿರುದ್ಧ ಗುರು ಶಚಿ ರತಿಸ್ವಾಯಂಭುವರಾರ್ವರು
ಕಕ್ಷಪ್ರಾಣನಿಗಿಂತ ಕಾಮನು ಕಿಂಚಿದಧಿಕನು ಇಂದ್ರನು

ದೇವೇಂದ್ರನಿಂದಧಿಕ ಮಹರುದ್ರ ರುದ್ರ ಸಮ ಶೇಷಗರುಡರು
ಗರುಡಶೇಷರಿಗಧಿಕರೆನಿಪರು ದೇವಿ ಭಾರತಿ ಸರಸ್ವತಿ

ವಾಯುವಿಗೆ ಸಮರಿಲ್ಲ ಜಗದೊಳು ವಾಯುದೇವರೆ ಬ್ರಹ್ಮರು
ವಾಯು ಬ್ರಹ್ಮಗೆ ಕೋಟಿ ಗುಣದಿಂ ಅಧಿಕಶಕ್ತಳು ಶ್ರೀರಮಾ

ಅನಂತ ಗುಣದಿಂ ಲಕುಮಿಗಧಿಕನು ಶ್ರೀ ಪುರಂದರವಿಠಲನು
ಘನ ಸಮರು ಇವಗಿಲ್ಲ ಜಗದೊಳು ಹನುಮ ಹೃತ್ಪದ್ಮವಾಸಿಗೆ