ಸಕಲವೆಲ್ಲವು ಹರಿಸೇವೆಯೆನ್ನಿ-Sakalavellu hariseve

ಸಕಲವೆಲ್ಲವು ಹರಿಸೇವೆಯೆನ್ನಿ
ರುಕುಮಿಣಿಯರಸ ವಿಟ್ಠಲನಲ್ಲದಿಲ್ಲವೆನ್ನಿ

ನುಡಿವುದೆಲ್ಲವು ನಾರಾಯಣನ ಕೀರ್ತನೆಯೆನ್ನಿ
ನಡೆವುದೆಲ್ಲವು ದೇವರ ಯಾತ್ರೆಯೆನ್ನಿ
ಕೊಡುವ ದಾನವು ಕಾಮಜನಕಗರ್ಪಿತವೆನ್ನಿ
ಎಡೆಯ ಅನ್ನವು ಹರಿಯ ಪ್ರಸಾದವೆನ್ನಿ

ಹೊಸ ವಸ್ತ್ರ ಉಡುವಲ್ಲಿ ಹರಿಯ ಬೆಳ್ಳುಡೆಯೆನ್ನಿ
ಕುಸುಮ ಪರಿಮಳವು ಶ್ರೀಕೃಷ್ಣಗೆನ್ನಿ
ಎಸೆವ ಆಭರಣ ಯಶೋದೆನಂದನಗೆನ್ನಿ
ಶಶಿಮುಖಿಯರ ಕೂಟ ಸೊಬಗು ಗೋವಳಗೆನ್ನಿ

ಆಟಪಾಟಗಳೆಲ್ಲ ಅಂತರ್ಯಾಮಿಗೆ ಎನ್ನಿ
ಊಟ ಸತ್ಕಾರ ಕಂಜನಾಭನಿಗೆನ್ನಿ
ನೀಟಾದ ವಸ್ತುಗಳು ಕೈಟಭಾಂತಕಗೆನ್ನಿ
ಕೋಟಲೆ ಸಂಸಾರ ನಾಟಕಧರಗೆನ್ನಿ

ನಿದ್ರೆ ಜಾಗರವು ಸಮುದ್ರಶಯನಗೆನ್ನಿ
ಭದ್ರನಿಧಿ ಗಜವರದಗೆನ್ನಿ
ರೌದ್ರ ದಾರಿದ್ರ್ಯ ರಾಘವನ ಮಾಯವೆನ್ನಿ
ಶ್ರೀಮುದ್ರೆಗಳ ಧರಿಸಿ ಹರಿದಾಸನೆನ್ನಿ

ಅಣುರೇಣು ತೃಣಕಾಷ್ಠ ಪರಿಪೂರ್ಣನಹುದೆನ್ನಿ
ಎಣಿಸಲಾಗದ ಅನಂತಮಹಿಮನೆನ್ನಿ
ಸೆಣಸುವ ರಕ್ಕಸರ ಶಿರವ ಚೆಂಡಾಡುವ
ಪ್ರಣವ ಗೋಚರ ಪುರಂದರವಿಠಲನೆನ್ನಿ

No comments: