ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ

ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ
ಗೋವಿಂದನ ನಾಮವ ಮರೆಯದಿರಿರೊ

ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು
ಸಂಭ್ರಮದರಸುಗಳೈದುಮಂದಿ
ಡಂಭಕತನದಿಂದ ಕಾಯುವ ಜೀವವ
ನಂಬಿ ನಚ್ಚಿ ಕೆಡಬೇಡಿ ಕಾಣಿರೊ

ನೆಲೆಯು ಇಲ್ಲದ ಕಾಯ ಎಲುವಿನ ಹಂದರವು
ಬಲಿದು ಸುತ್ತಿದ ಚರ್ಮದ ಹೊದಿಕೆ
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು
ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ

ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ
ಹರಿಯೆ ಸರ್ವೋತ್ತಮನೆಂದೆನ್ನಿರೊ
ಪುರಂದರವಿಠಲನ ಸ್ಮರಣೆಯ ಮಾಡಲು
ದುರಿತಭಯಂಗಳ ಪರಿಹರಿಸುವುದು

No comments: