ಕೆಟ್ಟು ನೆಂಟರ ಸೇರುವುದು ಬಲು ಕಠಿಣ

ಕೆಟ್ಟು ನೆಂಟರ ಸೇರುವುದು ಬಲು ಕಠಿಣ ಇನ್ನು
ಹುಟ್ಟೇಳು ಜನ್ಮಕ್ಕೆ ಇದು ಬೇಡ ಹರಿಯೆ

ವಿಷವ ಕುಡಿಯಲಿಬಹುದು ಎಸೆದ ಶೂಲದ ಮುಂದೆ
ಒಸಗಿ ಬಹು ಬೇಗದಿ ಹಾಯಬಹುದು
ವಿಷದ ಕುಂಡದ ಒಳಗೆ ಮುಳುಗಿಕೊಂಡಿರಬಹುದು
ಎಸೆವ ಅಂಬಿಗೆ ಎದೆಯ ಗುರಿಮಾಡಬಹುದು

ಶರಧಿ ಧುಮುಕಲಿಬಹುದು ಉರಗನಪ್ಪಲುಬಹುದು
ಊರ ಮಾರಿಗೆ ಗ್ರಾಸವಾಗಲಿಬಹುದು
ಪುರುಷಮೃಗ ಮೇಲ್ವಾಯ್ದು ಬರೆ ಶಿರವ ಕೊಡಬಹುದು
ಗರಗಸದಲಿ ಕೊರಳ ಕೊಯಿಸಿಕೊಳಬಹುದು

ಕುಡುಗೋಲು ಪಿಡಿದು ಕೂಲಿಯ ಮಾಡಿ ಉಣಬಹುದು
ಒಡಲಿಗಾಗಿ ಹುಡಿಯ ಮುಕ್ಕಬಹುದು
ಪೊಡವಿಯೊಳು ಪುರಂದರವಿಟ್ಠಲರಾಯನ
ಕಡು ಹರುಷದಿ ಭಜಿಸಿ ಸುಖಿಯಾಗಬಹುದು

No comments: