ಏನು ಬರೆದೆಯೊ ಬ್ರಹ್ಮ

ಏನು ಬರೆದೆಯೊ ಬ್ರಹ್ಮ ನೀನೆಷ್ಟು ನಿರ್ದಯನೊ ಅಭಿ-
ಮಾನವನು ತೊರೆದು ಪರರನ್ನು ಬೇಡುವುದ

ಗೇಣೊಡಲು ಪೊರೆವುದಕೆ ಪೋಗಿ ಪರರನು ಪಂಚ-
ಬಾಣಸಮ ರೂಪ ನೀನೆಂದು ಪೊಗಳೆ
ಆಣೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ

ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರೆಂದೆನಲು
ಅಲ್ಲವನು ತಿಂದ ಇಲಿಯಂತೆ ಕೊರಗುವುದ

ಹಿಂದೆ ಬರೆದ ಬರಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೊ
ಸಂದೇಹಿಸಲಿಬೇಡ ಪುರಂದರವಿಟ್ಠಲ 
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ

No comments: