ನಾರಾಯಣ ಗೋವಿಂದ ಹರಿಹರಿ

ನಾರಾಯಣ ಗೋವಿಂದ ಹರಿಹರಿ
ನಾರಾಯಣ ಗೋವಿಂದ

ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ

ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ

ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ

ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ

ದುರುಳ ಹಿರಣ್ಯನ ಕರುಳು ಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ

ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ

ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ

ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ

ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ

ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗಿಯಿಂದ

ಧರೆಯೊಳು ಪರಮನೀಚ ಸವರಲು ಕು-
ದುರೆಯನೇರಿದ ಕಲಿ ಚೆಂದ

ದೋಷದೂರ ಶ್ರೀಪುರಂದರವಿಠಲ
ಪೋಷಿಪ ಭಕ್ತರ ವೃಂದ

No comments: