ನಿನ್ನ ಆಶ್ರಯಿಸುವೆ ನಿಗಮಗೋಚರ

ನಿನ್ನ ಆಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೊ

ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತಕಾಲಕೆ, ಗೋ-
ವಿಂದನಾಶ್ರಯ ಮರಣಕಾಲದೊಳಗೆ

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯವುಳ್ಳ ನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ಎನ್ನಿಷ್ಟ ಪಡೆವರೆ ನಿನ್ನ ಆಶ್ರಯವು

ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗನುಶ್ರುತ ಪ್ರಣವಾಶ್ರಯವು
ಮತಿಯುತ ನರಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು

No comments: