ನಾರಾಯಣ ನಿನ್ನ ನಾಮದ ಸ್ಮರಣೆಯ

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ

ಕೂಡುವಾಗಲು ನಿಂತಾಡುವಾಗಲು ಮತ್ತೆ
ಹಾಡುವಾಗಲು ಹರಿದಾಡುವಾಗಲು
ಖೋಡಿ ವಿನೋದದಿ ನೋಡದೆ ನಾ ಬಲು
ಮಾಡಿದ ಪಾಪ ಬಿಟ್ಟೋಡಿ ಹೋಗೊ ಹಾಂಗೆ

ಊರಿಗೆ ಹೋಗಲಿ ಊರೊಳಗಿರಲಿ
ಕರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ನಿನ್ನನು
ಸಾರಿಸಾರಿಗೆ ನಾ ಬೇಸರದಹಾಂಗೆ

ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ
ಕಸವಿಸಿಯಿರಲಿ ಹರುಷವಿರಲಿ
ವಸುದೇವಾತ್ಮಜ ಶಿಶುಪಾಲಕ್ಷಯ
ಅಸುರಾಂತಕ ನಿನ್ನ ಹೆಸರು ಮರೆಯದಹಾಂಗೆ

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರು ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಮಂತ್ರದ ನಾಮದ

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣಕಮಲವನು
ಮನಸಿನೊಳಗೆ ಒಮ್ಮೆ ನೆನಸಿಕೊಳ್ಳುವ ಹಾಗೆ

ಜ್ವರ ಬಂದಾಗಲು ಚಳಿ ಬಂದಾಗಲು
ಮರಳಿ ಮರಳಿ ಮತ್ತೆ ನಡುಗುವಾಗ
ಹರಿನಾರಾಯಣ ದುರಿತನಿವಾರಣೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ

ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದಾ ಒಳಗಿರಿಸಿ
ಎಂತೋ ಪುರಂದರವಿಟ್ಠಲರಾಯನೆ
ಅಂತ್ಯಕಾಲದಲಿ ಚಿಂತಿಸೊ ಹಾಂಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: