ಧರ್ಮವೇ ಜಯವೆಂಬ ದಿವ್ಯಮಂತ್ರ

ಧರ್ಮವೇ ಜಯವೆಂಬ ದಿವ್ಯಮಂತ್ರ

ಮರ್ಮವನರಿತು ಮಾಡಲಿಬೇಕು ತಂತ್ರ

ವಿಷವಿಕ್ಕಿದವಗೆ ಷಡ್ರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲಿಬೇಕು
ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
ಮೋಸ ಮಾಡುವನ ಹೆಸರು ಮಗನಿಗಿಡಬೇಕು

ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು


No comments: