ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯಷಡುರಸಾನ್ನವನಿಟ್ಟೆನೊ

ಘಮಘಮಿಸುವ ಶಾಲ್ಯಾನ್ನ ಪಂಚಭಕ್ಷ್ಯ
ಅಮೃತಕೂಡಿದ ದಿವ್ಯ ಪರಮಾನ್ನವು
ರಮಾದೇವಿಯರು ಸ್ವಹಸ್ತದಿ ಮಾಡಿದ ಪಾಕ
ಭೂ ಮೊದಲಾದ ದೇವೇರ ಸಹಿತೌತಣ

ಅರವತ್ತು ಶಾಕ ಲವಣಶಾಕ ಮೊದಲಾದ
ಸರಸ ಮೊಸರು ಬುತ್ತಿ ಚಿತ್ರಾನ್ನವು
ಪರಮಮಂಗಳ ಅಪ್ಪಾವು ಅತಿರಸಗಳ
ಹರುಷದಿಂದಲಿ ಇಟ್ಟ ಹೊಸ ತುಪ್ಪವು

ಒಡೆಯಂಬೊಡೆ ದಧಿವಡೆಯು ತಿಂಥಿಣಿ
ಒಡೆಯ ಎಡೆಗೆ ಒಡನೆ ಬಡಿಸಿದೆ
ದೃಢವಾದ ಪದಾರ್ಥವನ್ನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರವಿಠಲನೆ ಉಣ್ಣೊ

No comments: