ನೆಚ್ಚನಯ್ಯ ಹರಿ ಮೆಚ್ಚನಯ್ಯ

ನೆಚ್ಚನಯ್ಯ ಹರಿ ಮೆಚ್ಚನಯ್ಯ

ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ
ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ

ತೊಗಲಿನ ದೇಹಕೆ ಗೋಪೀಗಂಧ ತೇದುಕೊಂಡು
ರೋಗ ಬಂದೆಮ್ಮೆಯಹಾಗೆ ಬರೆದುಕೊಂಬ ಮನುಜಗೆ

ಮರುಳುತನವು ಮಾತಿನಲ್ಲಿ ಹೃದಯದಲ್ಲಿ ವಿಷದ ಗುಟಿಕೆ
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ

ಹಣವಿಗೆ ಹಾರೈಸಿಕೊಂಡು ತಿರುಪತಿಗೆ ಹೋಹರ ಕಂಡು
ಹಣ ಕಾಸು ಕೊಂಡು ಬಂದು ಸ್ವಾಮಿಯ ನೋಡುವವಗೆ

ಬಾಯಿ ಬೀಗದಲ್ಲಿ ಹೋಯ್ದು ಹಾಲು ತುಪ್ಪಗಳನು ಸವಿದು
ಮೈಯು ಹುಳಿತ ನಾಯಿಯಂತೆ ಬೀದಿ ಬೀದಿ ತಿರುಗುವವಗೆ

ತಾನು ತನ್ನ ಮನೆಯ ಒಳಗೆ ದಾನ ಧರ್ಮಗಳನು ಕೊಡದೆ
ನೀನು ದಾನ ಮಾಡು ಎಂದು ಅನ್ಯರಿಗೆ ಹೇಳುವವಗೆ

ಏಕೋ ಭಾವ ಏಕೋಭಕ್ತಿ ಏಕೋಯುಕ್ತಿ ಏಕೋಮುಕ್ತಿ
ಬೇಕಾಗಿ ಪುರಂದರವಿಠಲನ್ನ ಭಜಿಸದವಗೆ

No comments: