ನಿಲ್ಲಬೇಕಯ್ಯ ಕೃಷ್ಣಯ್ಯ

ನಿಲ್ಲಬೇಕಯ್ಯ ಕೃಷ್ಣಯ್ಯ ನೀ

ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ
ವಲ್ಲಭ ಎನ್ನ ಹೃದಯದಲ್ಲಿ ಸತತ ನೀ

ಚುಪ್ಪಾಣಿ ಮುತ್ತಿಟ್ಟು ನೋಡುವೆ ನಿನ್ನ
ಚಪ್ಪಾಳಿ ತಟ್ಟಿ ನಾ ಪಾಡುವೆ
ಅಪ್ಪ ಶ್ರೀಕೃಷ್ಣ ನಿನ್ನೆತ್ತಿ ಮುದ್ದಿಸಿಕೊಂಬೆ
ಸರ್ಪಶಯನ ಕೃಪೆ ಮಾಡೆಂದು ಬೇಡುವೆ

ಚಂದದ ಹಾಸಿಗೆ ಹಾಸುವೆ ಪುನುಗು
ಗಂಧ ಕಸ್ತೂರಿಯ ಪೂಸುವೆ
ತಂದು ಮುದದಿ ಮುತ್ತಿನ ಹಾರ ಹಾಕುವೆ ಆ-
ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ

ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳ ಪಾಡುವೆ
ಚೆಲುವ ಶ್ರೀ ಪುರಂದರವಿಠಲರಾಯನೆ
ನಿಲ್ಲು ಎನ್ನ ಮನದಲ್ಲಿ ಒಂದೆ ಘಳಿಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: