ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ಭೂತದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲಿಬೇಕು
ಮಾತು ಮಾತಿಗೆ ಹರಿಯೆನ್ನಬೇಕು

ಆರುವರ್ಗವನಳಿಯಲಿಬೇಕು
ಮೂರು ಗುಣಂಗಳ ಮೀರಲಿಬೇಕು
ಸೇರಿ ಬ್ರಹ್ಮನೊಳಿರಬೇಕು

ಅಷ್ಟಮದಂಗಳ ತುಳಿಯಲಿಬೇಕು
ದುಷ್ಟರ ಸಂಗವ ಬಿಡಬೇಕು
ಕೃಷ್ಣ ಕೇಶವ ಎನ್ನಬೇಕು

ವೇದ ಶಾಸ್ತ್ರವನೋದಲಿಬೇಕು
ಭೇದ ಅಹಂಕಾರವ ನೀಗಲಿಬೇಕು
ಮಾಧವ ಸ್ಮರಣೆಯೊಳಿರಬೇಕು

ಶಾಂತಿ ಕ್ಷಮೆ ದಯೆ ಪಿಡಿಯಲಿಬೇಕು
ಭ್ರಾಂತಿ ಕ್ರೋಧವ ಕಳೆಯಲಿಬೇಕು
ಶಾಂತರ ಸಂಗದೊಳಿರಬೇಕು

ಗುರುವಿನ ಚರಣಕ್ಕೆರಗಲಿಬೇಕು
ತರಣೋಪಾಯವನರಿಯಲಿಬೇಕು
ವಿರಕ್ತ ಮಾರ್ಗದಲಿರಬೇಕು

ಬಂದದ್ದುಂಡು ಸುಖಿಸಲಿಬೇಕು
ನಿಂದಾಸ್ತುತಿಗಳ ತಾಳಲಿಬೇಕು
ತಂದೆ ಪುರಂದರವಿಠಲ ಎನಬೇಕು

No comments: