ಮಾನಹೀನನಿಗೆ ಅಭಿಮಾನವೇಕೆ

ಮಾನಹೀನನಿಗೆ ಅಭಿಮಾನವೇಕೆ

ಜ್ಞಾನವಿಲ್ಲದವಂಗೆ ಗುರುಭೋಧೆಯೇಕೆ

ಕಾಡು ತಿರುಗುವಗೆ ಕನಕಭೂಷಣವೇಕೆ
ಓಡೊಳಗೆ ತಿರುಗುವಗೆ ಕನಕಭೂಷಣವೇಕೆ
ಬೇಡಿದರೆ ಕೊಡದಿಹಗೆ ಕಡು ಬಿಂಕತನವೇಕೆ
ಪಾಡಲರಿಯದವಂಗೆ ಪ್ರೌಢತನವೇಕೆ

ಅಂಬಲಿಯನುಂಬುವಗೆ ಅಮೃತಾನ್ನ ತಾನೇಕೆ
ಕಂಬಳಿ ಹೊದೆದವಗೆ ಮಡಿಯೇತಕೆ
ಡೊಂಬಾಟವಿಕ್ಕುವಗೆ ಗಂಭೀರತನವೇಕೆ
ಹಂಬಲನು ಬಿಡದವಗೆ ಹರಿನಾಮವೇಕೆ

ಭೂಸುರರ ಕೊಲುವವಗೆ ಭೂರಿ ಧರ್ಮಗಳೇಕೆ
ಭಾಷೆಗೆಟ್ಟವನಿಗೆ ನಂಬುಗೆಯದೇತಕೆ
ಕ್ಲೇಶ ಒಡಲೊಳಗಿರಲು ತೀರ್ಥಯಾತ್ರೆಗಳೇಕೆ
ಆಸೆ ಬಿಡದಿದ್ದವಗೆ ಸನ್ಯಾಸವೇಕೆ

ಮಿತಿ ಮೀರಿ ನಡೆವವಗೆ ವ್ರತ ನೇಮಗಳು ಏಕೆ
ಸತಿಗೆ ಅಳುಕುವನ ಸಾಹಸವು ಏಕೆ
ಮತಿ ಶುದ್ಧಿಯಿಲ್ಲದ ಮಂತ್ರ ತಂತ್ರಗಳೇಕೆ
ಗತಿಯ ಚಿಂತಿಸದವನ ವಿಪ್ರತ್ವವೇಕೆ

ಸಾಮಾನ್ಯನಿಗೆ ಸಾರ್ವಭೌಮ ಪದವಿಯದೇಕೆ
ಪ್ರೇಮವಿಲ್ಲದ ಬಂಧುಜನವೇತಕೆ
ಸ್ವಾಮಿ ಶ್ರೀ ಪುರಂದರವಿಟ್ಠಲನ ನೆನೆಯದಿಹ
ತಾಮಸಾಧಮನಿಗೆ ಕೈವಲ್ಯವೇಕೆ


ರಾಗ: ಕಾಂಬೋದಿ   ತಾಳ: ಅಟ್ಟ

No comments: