ಮೂರ್ಖರಾದರು ಜನರು ಲೋಕದೊಳಗೆ

 ಮೂರ್ಖರಾದರು ಜನರು ಲೋಕದೊಳಗೆ

ಏಕ ದೈವವ ಬಿಟ್ಟು ಕಾಕು ದೈವವ ಭಜಿಸಿ

ಒಂಟಿಯಲಿ ಹೆಂಡತಿಯ ಬಿಡುವಾತನೇ ಮೂರ್ಖ
ನೆಂಟರಿಗೆ ಸಾಲವನು ಕೊಡುವಾತ ಮೂರ್ಖ
ಗಂಟನೊಬ್ಬರ ಕೈಯಲಿಡುವಾತ ಮೂರ್ಖ ಜನ-
ಕಂಟಕನಾದವನು ಕಡು ಮೂರ್ಖನಯ್ಯ

ಹಡೆದ ಮಕ್ಕಳ ಮಾರಿ ಒಡಲ ಹೊರೆವವ ಮೂರ್ಖ
ಮಡದಿ ಹುಟ್ಟಿದ ಮನೆಯೊಳಿರುವವನು ಮೂರ್ಖ
ಬಡತನವು ಬಂದಾಗ ಬೈದುಕೊಂಬುವ ಮೂರ್ಖ
ದೃಢಭಕ್ತಿಯಿಲ್ಲದವ ಕಡು ಮೂರ್ಖನಯ್ಯ

ಮುಪ್ಪಿನಲಿ ಮದುವೆ ಮಾಡಿಕೊಂಬುವವ ಮೂರ್ಖ
ಸರ್ಪನಲಿ ಸರಸವಾಡುವನೆ ಮೂರ್ಖ
ಇಪ್ಪತ್ತು ಒಂದು ಕುಲ ಉದ್ಧರಿಸದವ ಮೂರ್ಖ
ಅಪ್ಪ ರಂಗಯ್ಯನ ಭಜಿಸದವ ಮೂರ್ಖನಯ್ಯ

ಸತ್ತ ಕುರುವಿನ ತಾಯ ಹಾಲ ಕರೆವವ ಮೂರ್ಖ
ಒತ್ತೆಯಿಲ್ಲದೆ ಸಾಲ ಕೊಡುವವನು ಮೂರ್ಖ
ಹತ್ತೆಂಟು ಬಗೆಯಲ್ಲಿ ಹಂಬಲಿಸುವವ ಮೂರ್ಖ
ಹೆತ್ತ ತಾಯಿಯ ಬೈವ ಕಡೂ ಮೂರ್ಖನಯ್ಯ

ರಾಮನಾಮವ ನಂಬಿ ಭಜಿಸದಿದ್ದವ ಮೂರ್ಖ
ಹೇಮವನು ಗಳಿಸಿ ಉಣದವನು ಮೂರ್ಖ
ಕಾಮದಲಿ ಹಿರಿಯಳ ಕೂಡಿಕೊಂಡವ ಮೂರ್ಖ
ಭೂಮಿ ದಾನವ ತೆಗೆವ ಭೂಪತಿಯು ಮೂರ್ಖ

ಕಾಶಿಯಲಿ ದೇಹವನು ತೊಳೆಯದಿದ್ದವ ಮೂರ್ಖ
ಭೂಸುರರಿಗನ್ನವನು ಕೂಡದವನು ಮೂರ್ಖ
ಶೇಷಗಿರಿ ಕೃಷ್ಣನ್ನ ಭಜಿಸದಿದ್ದವ ಮೂರ್ಖ
ದಾಸನಾಗದ ಮನುಜ ಕಡು ಮೂರ್ಖನಯ್ಯ

ಉಂಡ ಮನೆಗೆರಡನ್ನು ಬಗೆವಾತನೇ ಮೂರ್ಖ
ಕೊಂಡೆ ಮಾತನು ಕೇಳಿ ಕುಣಿವವನು ಮೂರ್ಖ
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ಕಂಡು ಕಂಡು ಭಜಿಸದವ ಕಡು ಮೂರ್ಖನಯ್ಯರಾಗ: ಮುಖಾರಿ     ತಾಳ: ಝಂಪೆ

1 comment:

Anonymous said...

Thanks a ton! Please provide the link to the song if you have.