ಮಂದಮತಿಯೋ ನಾನು ಮದನಜನಕನು ನೀನು

ಮಂದಮತಿಯೋ ನಾನು ಮದನಜನಕನು ನೀನು
ಕುಂದುಗಳನೆಣಿಸದೆ ದಯಮಾಡಿ ಸಲಹೋ

ಪಾಪಕರ್ತನು ನಾನು ಪಾಪನಾಶನ ನೀನು
ಕೋಪ ಮದ ಮತ್ಸರದಿ ಸುಳಿವೆ ನಾನು
ತಾಪವನು ತರಿದು ನಿರ್ಭಯವ ಮಾಡುವೆ ನೀನು
ರೂಪ ಛಾಯಕೆ ಮರುಳುಗೊಂಬೆನೊ ನಾನು

ಶರಣರಕ್ಷಕ ನೀನು ಪರಮಪಾತಕಿ ನಾನು
ದುರಿತ ಪರ್ವತವ ಪರಿಹರಿಪೆ ನೀನು
ಮರುಳುಗೊಂಬೆಯು ನಾನು ಅರಿತು ರಕ್ಷಿಪೆ ನೀನು
ಗರುವಾಹಂಕಾರಿ ನಾನು ಅಗಮ್ಯ ನೀನು

ಮಂದಭಾಗ್ಯನು ನಾನು ಇಂದಿರಾಪತಿ ನೀನು
ಹಿಂದು ಮುಂದಿನ ಸುದ್ದಿ ಅರಿಯದವ ನಾನು
ತಂದೆ ಶ್ರೀಪುರಂದರವಿಟ್ಠಲರಾಯನೆ
ಎಂದೆಂದು ಭಕ್ತರನು ಸಲಹುವೆಯೋ ನೀನು



ರಾಗ: ಕಾಂಬೋದಿ, ತಾಳ: ಝಂಪೆ

No comments: