ಮನವ ಶೋಧಿಸಬೇಕು ನಿತ್ಯ

ಮನವ ಶೋಧಿಸಬೇಕು ನಿತ್ಯ ದಿನ
ದಿನ ಮಾಡುವ ಪಾಪ ಪುಣ್ಯದ ವೆಚ್ಚ

ಧರ್ಮ ಅಧರ್ಮ ವಿಂಗಡಿಸಿ ಅ-
ಧರ್ಮದ ನರಗಳ ಬೇರ ಕತ್ತರಿಸಿ
ನಿರ್ಮಲಾಚಾರದಿ ಚರಿಸಿ ಪರ
ಬೊಮ್ಮ ಮೂರುತಿ ಪಾದಕಮಲವ ಭಜಿಸಿ

ತನುವ ಖಂಡಿಸಿ ಒಮ್ಮೆ ಮಾಣೋ ನಿನ್ನ
ಮನವ ದಂಡಿಸಿ ಪರಮಾತ್ಮನ್ನ ಕಾಣೋ
ಕೊನೆಗೆ ನಿನ್ನೊಳು ನೀ ಜಾಣ ಮುಕ್ತಿ
ನಿನಗೆ ದೂರಿಲ್ಲವು ಒಂದೇ ಗೇಣೊ

ಆತನ ಭಕುತರಿಗೆ ಕೇಡಿಲ್ಲ ಅವ
ಪಾತಕ ಪತಿತ ಸಂಗವ ಮಾಡುವನಲ್ಲ
ನೀತಿವಂತರು ಕೇಳಿರೆಲ್ಲ ನಮ-
ಗಾತನೆ ಗತಿ ಈವ ಪುರಂದರವಿಠಲ


ರಾಗ: ನಾದನಾಮಕ್ರಿಯೆ    ತಾಳ: ಛಾಪು

No comments: