ದಾಸನ ಮಾಡಿಕೊ ಎನ್ನ

ದಾಸನ ಮಾಡಿಕೊ ಎನ್ನ ಇಷ್ಟು
ಘಾಸಿ ಮಾಡುವರೇನೊ ಕರುಣಾಸಂಪನ್ನ

ದುರುಳ ಬುದ್ದಿಗಳೆಲ್ಲ ಬಿಡಿಸೋ ನಿನ್ನ
ಕರುಣ ಕವಚವೆನ್ನ ಹರಣಕ್ಕೆ ತೊಡಿಸೊ
ಚರಣ ಸೇವೆ ಎನಗೆ ಕೊಡಿಸೊ
ಅಭಯ ಕರಪುಷ್ಪ ಎನ್ನಯ ಶಿರದೊಳು ಮುಡಿಸೊ

ದೃಢಭಕ್ತಿ ನಿನ್ನಲ್ಲಿ ಬೇಡಿ ದೇವ
ಅಡಿಗೆರಗುವೆನಯ್ಯ ಅನುದಿನ ಪಾಡಿ
ಕಡೆಗಣ್ಣಿಲೇಕೆನ್ನ ನೋಡಿ ಬಿಡುವೆ
ಕೊಡು ನಿನ್ನ ಧ್ಯಾನವ ಮನ ಶುಚಿ ಮಾಡಿ

ಮೊರೆ ಹೊಕ್ಕವರ ಕಾಯ್ವ ಬಿರುದು ನೀ
ಮರೆಯದೆ ರಕ್ಷಣೆ ಮಾಡೆನ್ನ ಪೊರೆದು
ದುರಿತ ರಾಶಿಗಳೆಲ್ಲ ತರಿದು ಸ್ವಾಮಿ
ಪುರಂದರವಿಠಲ ಕರುಣದಿ ಕರೆದು

No comments: