ತಾಳು ತಾಳೆಲೊ ರಂಗಯ್ಯ

ತಾಳು ತಾಳೆಲೊ ರಂಗಯ್ಯ ನೀ
ತಾಳು ತಾಳೆಲೊ ಕೃಷ್ಣಯ್ಯ

ನಾಳೆ ನಮ್ಮನೆಗೆ ಬಂದರೆ ನಿನ್ನ
ಕಾಲ ಕಂಭಕೆ ಕಟ್ಟಿ ಪೇಳುವೆ ಗೋಪಿಗೆ

ದೊರೆಗಳ ಮಗನೆಂಬುದದೇನೊ ಆ-
ತುರದಿ ಮನೆ ಪೊಕ್ಕ ಪರಿಯೇನೊ
ದುರುಳಬುದ್ಧಿ ನಿನಗೆ ತರವೇನೊ ಹಿಂದೆ
ತಿರುಗಿ ಬೇಡ್ಯುಂಡದ್ದು ಮರೆತ್ಯೇನೊ

ಚಿಕ್ಕ ಮಕ್ಕಳು ಹೋದರು ಎಂದು ನೀ ಬಂದು
ಕಕ್ಕುಲತೆಯ ಮಾಡುವರೇನೊ
ಸಿಕ್ಕಿದ ಗೋಪಾಲ ಹಿಡಿಯೆಂದರೆ ನೀ
ಬಿಕ್ಕಿ ಬಿಕ್ಕಿ ಅತ್ತರೆ ಬಿಡುವರೇನೊ

ಕಟ್ಟಿದಾಕಳ ಮೊಲೆಗಳನುಂಡು ಕರು
ಬಿಟ್ಟು ಹೇಳುವುದೇನೆಲೊ ರಂಗ
ಸೃಷ್ಟಿಗೊಡೆಯ ಶ್ರೀ ಪುರಂದರವಿಠಲ ನೀ
ಕಟ್ಟಲ್ಲಿ ನಿಂತ ಕಾರಣವೇನೊ ರಂಗ

No comments: