ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ

ತೋಳು ತೋಳು ತೋಳು ಕೃಷ್ಣ ತೋಳನ್ನಾಡೈ
ನೀಲಮೇಘಶ್ಯಾಮ ಕೃಷ್ಣ ತೋಳನ್ನಾಡೈ

ಗಲಿಕೆಂಬಂದುಗೆ ಉಲಿಯುವ ಗೆಜ್ಜೆಯ ತೋಳನ್ನಾಡೈ
ಅಲುಗುವ ಅರಳೆಲೆ ಮಾಗಾಯ್ಮಿನುಗಲು ತೋಳನ್ನಾಡೈ
ನೆಲುವು ನಿಲುಕದೆಂದೊರಳ ತಂದಿಡುವನೆ ತೋಳನ್ನಾಡೈ
ಚೆಲುವ ಮಕ್ಕಳ ಮಾಣಿಕ್ಯವೆ ನೀ ತೋಳನ್ನಾಡೈ

ದಟ್ಟಡಿಯಿಡುತಲಿ ಬೆಣ್ಣೆಯ ಮೆಲುವನೆ ತೋಳನ್ನಾಡೈ
ಕಟ್ಟಿದ ಕರಡೆಯ ಕರುವೆಂದೆಳೆವನೆ ತೋಳನ್ನಾಡೈ
ಬೊಟ್ಟಿನಲ್ಲಿ ತಾಯ್ಗಣಕಿಸಿ ನಗುವನೆ ತೋಳನ್ನಾಡೈ
ಬಟ್ಟಲ ಹಾಲನು ಕುಡಿದು ಕುಣಿವನೇ ತೋಳನ್ನಾಡೈ

ಅಂಬೆಗಾಲಿಲೊಂದೊರಳನ್ನೆಳೆವನೆ ತೋಳನ್ನಾಡೈ
ತುಂಬಿದ ಬಂಡಿಯ ಮುರಿಯಲೊದ್ದವನೆ ತೋಳನ್ನಾಡೈ
ಕಂಬದಿಂದಲವತರಿಸಿದವನೆ ನೀ ತೋಳನ್ನಾಡೈ
ನಂಬಿದವರನು ಹೊರೆವ ಕೃಷ್ಣ ತೋಳನ್ನಾಡೈ

ಕಾಲಕೂಟದ ವಿಷವ ಕಲಕಿದ ತೋಳನ್ನಾಡೈ
ಕಾಳಿಂಗನ ಹೆಡೆಯನು ತುಳಿದ ತೋಳನ್ನಾಡೈ
ಕಾಳೆಗದಲಿ ದಶಕಂಠನ ಮಡುಹಿದ ತೋಳನ್ನಾಡೈ
ಶಾಲಕ ವೈರಿಯೆ ಕರುಣಿಗಳರಸನೆ ತೋಳನ್ನಾಡೈ

ನಖದಿಂದಲಿ ಹಿರಣ್ಯಕನನು ಸೀಳಿದ ತೋಳನ್ನಾಡೈ
ಸುಖವನಿತ್ತು ಪ್ರಹ್ಲಾದನ ಕಾಯ್ಡವ ತೋಳನ್ನಾಡೈ
ವಿಕಳಗೊಳಿಸಿದೆ ಗೋಪಿಯರೆಲ್ಲರ ತೋಳನ್ನಾಡೈ
ರುಕುಮಿಣಿಪತಿ ಸಿರಿಪುರಂದರವಿಟ್ಠಲ ತೋಳನ್ನಾಡೈ


 1- ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

2- ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ

2 comments:

Mala H N said...

ತೋಳನ್ನಾಡೈ ಎಂಬುದರ ಅರ್ಥವೇನು? ತೋಳಲ್ಲಿ ಆಡು ಎಂದೋ ಅಥವಾ ತೋಳನ್ನು ಆಡಿಸು ಎಂದೋ?!
ತುಂಬಾ ಚೆನ್ನಾದ ಹಾಡು. ಧನ್ಯವಾದ

Unknown said...

ಈ ಹಾಡಿನ ಭಾವಾರ್ಥ ವಿವರಣೆ ಸಿಗಬಹುದೇ?