
ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ
ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೊ ಕರುಣ
ಅಳಗಿರಿಯಿಂದಲಿ ಬಂದಾ ಸ್ವಾಮಿ ಅಂಜನಗಿರಿಯಲಿ ನಿಂದ
ಕೊಳಲೂದೊ ಧ್ವನಿ ಚಂದಾ ನಮ್ಮ ಕುಂಡಲರಾಯ ಮುಕುಂದ
ಬೇಟೆಯಾಡುತ ಬಂದಾ ಸ್ವಾಮಿ ಬೆಟ್ಟದ ಮೇಲೆ ನಿಂದಾ
ನೀಟುಗಾರ ಗೋವಿಂದಾ ಅಲ್ಲಿ ಜೇನು ಸಕ್ಕರೆಯನು ತಿಂದಾ
ಮೂಡಲಗಿರಿಯಲಿ ನಿಂತ ಮುದ್ದು ವೆಂಕಟಪತಿ ಬಲವಂತ
ಈಡಿಲ್ಲ ನಿನಗೆ ಶ್ರೀಕಾಂತಾ ಈರೇಳು ಲೋಕಕನಂತ
ಆಡಿದರೆ ಸ್ಥಿರವಪ್ಪ ಅಬದ್ಧಗಳಾಡಲು ಒಪ್ಪ
ಬೇಡಿದ ವರಗಳನಿಪ್ಪ ನಮ್ಮ ಮೂಡಲಗಿರಿ ತಿಮ್ಮಪ್ಪ
ಅಪ್ಪವ ಅತಿರಸ ಮೆದ್ದ ಸ್ವಾಮಿ ಅಸುರರ ಕಾಲಲಿ ಒದ್ದ
ಸತಿಯರ ಕೂಡಾಡುತಲಿದ್ದ ಸ್ವಾಮಿ ಸಕಲ ದುರ್ಜನರನು ಗೆದ್ದ
ಬಗೆಬಗೆ ಭಕ್ಷ್ಯ ಪರಮಾನ್ನ ನಾನಾ ಬಗೆಯ ಸಕಲ ಶಾಲ್ಯಾನ್ನ
ಬಗೆಬಗೆ ಸೊಬಗು ಮೋಹನ್ನ ನಮ್ಮ ನಗೆಮುಖದ ಪ್ರಸನ್ನ
ಕಾಶೀ ರಾಮೇಶ್ವರದಿಂದ ಅಲ್ಲಿ ಕಾಣಿಕೆ ಬರುವುದೆ ಚಂದ
ದಾಸರ ಕೂಡೆ ಗೋವಿಂದ ಅಲ್ಲಿ ದಾರಿ ನಡೆವುದೇ ಚೆಂದ
ಎಲ್ಲ ದೇವರ ಗಂಡ ಅವ ಚಿಲ್ಲರೆ ದೈವದ ಮಿಂಡ
ಬಲ್ಲಿದರಿಗೆ ಉದ್ದಂಡ ಶಿವನ ಬಿಲ್ಲ ಮುರಿದ ಪ್ರಚಂಡ
ಕಾಸು ತಪ್ಪಿದರೆ ಪಟ್ಟಿ ಬಡ್ಡಿ ಕಾಸು ಬಿಡದ ಗಂಟು ಕಟ್ಟಿ
ದಾಸನೆಂದರೆ ಬಿಡ ಗಟ್ಟಿ ನಮ್ಮ ಕೇಸಕ್ಕಿ ತಿಮ್ಮಪ್ಪಸೆಟ್ಟಿ
ದಾಸರ ಕಂಡರೆ ಪ್ರಾಣ ತಾ ಧರೆಯೊಳಗಧಿಕ ಪ್ರವೀಣ
ದ್ವೇಷಿಯ ಗಂಟಲ ಗಾಣ ನಮ್ಮ ದೇವಗೆ ನಿತ್ಯಕಲ್ಯಾಣ
ಮೋಸ ಹೋಗುವನಲ್ಲಯ್ಯ ಒಂದು ಕಾಸಿಗೆ ಒಡ್ಡುವ ಕೈಯ
ಏಸು ಮಹಿಮಗಾರನಯ್ಯ ನಮ್ಮ ವಾಸುದೇವ ತಿಮ್ಮಯ್ಯ
ಚಿತ್ತವಧಾನ ಪರಾಕು ನಿನ್ನ ಚಿತ್ತದ ದಯವೊಂದೆ ಸಾಕು
ಸತ್ವವಾಹಿನಿ ನಿನ್ನ ವಾಕು ನೀನು ಸಕಲ ಜನರಿಗೆ ಬೇಕು
ಅಲ್ಲಲ್ಲಿ ಪರಿಷೆಯ ಗುಂಪು ಮತ್ತಲ್ಲಲ್ಲಿ ತೋಪಿನ ತಂಪು
ಅಲ್ಲಲ್ಲಿ ಸೊಗಸಿನ ಸೊಂಪು ಮತ್ತಲ್ಲಲ್ಲಿ ಪರಿಮಳದಿಂಪು
ಅಲ್ಲಲ್ಲಿ ಜನಗಳ ಕೂಟ ಮತ್ತಲ್ಲಲ್ಲಿ ಬ್ರಾಹ್ಮಣರೂಟ
ಅಲ್ಲಲ್ಲಿ ಪಿಡಿದ ಕೋಲಾಟ ಮತ್ತಲ್ಲಿಂದ ಊರಿಗೆ ಓಟ
ಪಾಪ ವಿನಾಶಿನಿ ಸ್ನಾನ ಹರಿ ಪಾದೋದಕವೇ ಪಾನ
ಕೋಪತಾಪಗಳ ನಿಧಾನ ನಮ್ಮ ಪುರಂದರವಿಠಲನ ಧ್ಯಾನ
ಯುಟ್ಯೂಬ್ ನಲ್ಲಿ ನೋಡಲು/ಕೇಳಲು ಇಲ್ಲಿ ಕ್ಲಿಕ್ ಮಾಡಿ