ಪೊಂಗೊಳಲನೂದುತಿಹ ಯದುಕುಲೋತ್ತುಂಗ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ತಿಂಗಳಾಪಾಂಗ ನೀರಾಜಿತ ಶುಭಾಂಗ

ಸಲಿಲಗಾಚಲಧರನೆ ಇಳೆಯಾಣ್ಮ ಜ್ವಲನೇತ್ರ
ಬಲಿಯ ಬೇಡಿದೆ ಭೃಗುಕುಲಜನೆನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ
ಖಳರ ಸಂಭೋಧಿಸಿದೆ ಚೆಲುವ ಹಯವೇರಿ

ಬಿಡದೆ ನೋಡಿದೆ ಬೆಟ್ಟದಡಿಗೆ ಬೆನ್ನನು ಕೊಟ್ಟೆ
ಅಡವಿಚರ ಕಡುಕೋಪಿ ಕೊಡೆಯ ಪಿಡಿದು
ಕೊಡಲಿಕೈ ಜಡೆ ಧರಿಸಿ ಗಿಡ ಹತ್ತಿ ಕೆಡಿಸಿ ಸ-
ನ್ಮಡದಿಯರ ಹಯವೇರಿ ಕಡಿದೆ ರಣಶೂರ

ವಾರಿಚರ ಕೂರ್ಮಾವತಾರ ಸೂಕರ ಹರಿಯೆ
ಧಾರುಣೆಯನಳೆದೆ ಶೂರರನು ಗೆಲಿದೆ
ನೀರಜಾಕ್ಷಿಯ ತಂದೆ ಚೋರ ವ್ರತವನಳಿದೆ ಹಯ-
ವೇರಿದನೆ ಪುರಂದರವಿಠಲ ಜಗದಯ್ಯ


No comments: