ಪರಾನ್ನವೇತಕೆ ಬಂತಯ್ಯ

ಪರಾನ್ನವೇತಕೆ ಬಂತಯ್ಯ ಎನಗೆ ಇಂದು
ಪರಾನ್ನವೇತಕೆ ಬಂತಯ್ಯ?

ಪರಾನ್ನವೇತಕೆ ಬಂತು ಪರಮೇಷ್ಟಿಜನಕನ
ಪರನೆಂದು ತಿಳಿಸದೆ ಪರಗತಿ ಕೆಡಿಸುವ

ಸ್ನಾನವ ಮಾಡಿಕೊಂಡು ಕುಳಿತು ಬಹು
ಮೌನದಿಂದಿರಲಿಸದು
ಶ್ರೀನಿವಾಸನ ಧ್ಯಾನಮಾಡದೆ ಮನವಿದು
ತಾನೆ ಓಡುವುದು ಶ್ವಾನನೋಪಾದಿಯಲಿ

ಜಪವ ಮಾಡುವ ಕಾಲದಿ ಕರೆಯ ಬರೆ
ವಿಪರೀತವಾಗುವುದು
ಸ್ವಪನದಂತೆ ಪೊಳೆದು ನನ್ನ ಮನಕೆ ಬಲು
ಸುಪಥವ ತಪ್ಪಿಸಿ ಅಪಗತಿ ಕೊಡುವಂಥ

ಪ್ರಸ್ಥದ ಮನೆಯೊಳಗೆ ಕರೆಯದೆ ಪೋಗಿ
ಸ್ವಸ್ಥದಿ ಕುಳಿತುಕೊಂಡು
ವಿಸ್ಥಾರವಾಗಿ ಹರಟೆಯನೆ ಬಡಿದು ಪ್ರ-
ಶಸ್ತವಾಯಿತು ಎಂದು ಮಸ್ತಕ ತಿರುವುವ

ಯಜಮಾನನು ಮಾಡಿದ ಪಾಪಂಗಳ
ವ್ರಜವು ಅನ್ನದೊಳಿರಲು
ದ್ವಿಜರು ಭುಂಜಿಸಲಾಗಿ ಅವರ ಉದರದೊಳು
ನಿಜವಾಗಿ ಸೇರುವುದು ಸುಜನರು ಲಾಲಿಸಿ

ಮಾಡಿದ ಮಹಾಪುಣ್ಯವ ಓದನಕಾಗಿ
ಕಾಡಿಗೊಪ್ಪಿಸಿಕೊಡುತ
ರೂಢಿಗಧಿಕನಾದ ಪುರಂದರವಿಠಲನ
ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ

No comments: