
ಬಾ ಬಾ ಎನ್ನಂತರಂಗ ಮಲ್ಲರಗಜ ಸಿಂಗ ದುರಿತ ಭವಭಂಗ
ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯಿದ ಉಲ್ಲಾಸ
ಇಭವರದನೆ ಶ್ರೀನಿವಾಸ
ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನ ಕಾವ
ಚಂದ್ರ ಪುಷ್ಕರಿಣಿಯ ತೀರವಿಹಾರ
ಇಂದ್ರಾದಿ ಸುರ ಪರಿವಾರ
ಚಂದ್ರಶೇಖರ ನುತನಾದ ಸುಖ-
ಸಾಂದ್ರ ಸುಗುಣ ಗಂಭೀರ
ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿ-
ಭೀಷಿಣಗೊಲಿದ ಸುಪ್ರಾಣ
ಶಂಬರಾರಿಯ ಪಿತ ಡಂಬರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರು ನಾರದಕೃತ ಸ್ತೋತ್ರ
No comments:
Post a Comment