ಬಂದು ನಿಂತಿಹ ನೋಡಿ ಭೂತಳದಿ ವೆಂಕಟ

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ

ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ-
ಯೂರಭೂಷಿತ ಮಾರಪಿತ ಗುಣ ಮೋಹನಾಂಗ
ಚಾರು ಪೀತಾಂಬರ ಕಟಿ ಕರವೀರ ಕ-
ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು-
ತಿರೆ ವದನಾರವಿಂದನು ನಗುತ ನಲಿಯುತ

ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲ ಪುಷ್ಪ ಕಸ್ತೂರಿಯಿಟ್ಟ
ಚೆಲ್ವ ಫಣಿಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂಗಲ್ಯು ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ

ಪದಕ ಕೌಸ್ತುಭಧಾರ ಸರಿಗೆಯ ಕಂಧರ
ಸುದರುಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು
ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ
ವಿಧಿ ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿ ಮಹಿಳೆ ಸಹಿತದಿ ಪದುಮನಾಭ ಪುರಂದರವಿಟ್ಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ

No comments: