ಮೂಢ ಬಲ್ಲನೆ ಜ್ಞಾನ ದೃಢಭಕ್ತಿಯ

ಮೂಢ ಬಲ್ಲನೆ ಜ್ಞಾನ ದೃಢಭಕ್ತಿಯ
ಕಾಡ ಕಪಿ ಬಲ್ಲುದೇ ಮಾಣಿಕದ ಬೆಲೆಯ

ಕೋಣ ಬಲ್ಲುದೆ ವೀಣೆ ನುಡಿಯುವ ಸುನಾದವನು
ಗೋಣಿ ಬಲ್ಲುದೆ ಎತ್ತಿನ ದುಃಖವ
ಪ್ರಾಣ ತೊಲಗಿದ ದೇಹ ಕಿಚ್ಚೆಂದು ಬಲ್ಲುದೆ
ಕ್ಷೋಣಿಯೊಳು ಕುರುಡ ಬಲ್ಲನೆ ಹಗಲು ಇರುಳ

ಬಧಿರ ಬಲ್ಲನೆ ಸುಸಂಗೀತ ಸ್ವಾರಸ್ಯವನು
ಚದುರನುಡಿಯಾಡಬಲ್ಲನೆ ಮೂಕನು
ಕ್ಷುಧೆ ಇಲ್ಲದಾ ಮನುಜ ಅಮೃತಾನ್ನ ಸವಿದಪನೆ
ಮಧುರ ವಚನವ ಬಲ್ಲನೆ ದುಷ್ಟ ಮನುಜ

ಅಜ ಬರೆದ ಬರಹವನು ತೊಳೆಯಬಲ್ಲನೆ ಜಾಣ
ನಿಜಭಕ್ತಿ ಮುಕ್ತಿ ಸುಖವನು ಕೊಡುವ
ಭುಜಗೇಂದ್ರಶಯನ ಸಿರಿಪುರಂದರವಿಟ್ಠಲನ
ಭಜಿಸಲರಿಯದವ ಬಲ್ಲನೆ ಮುಕ್ತಿ ಸುಖವ



ರಾಗ: ಮುಖಾರಿ     ತಾಳ: ಝಂಪೆ