ಮಧ್ವರಾಯರ ನೆನೆದು ಶುದ್ಧರಾಗಿರೊ

ಮಧ್ವರಾಯರ ನೆನೆದು ಶುದ್ಧರಾಗಿರೊ
ಹೊದ್ದಿ ವೈಷ್ಣವಮತ ಭವಾಬ್ಧಿ ದಾಟಿರೊ

ಉದಯದಲ್ಲಿ ಏಳುವಾಗ ನದಿಯ ಸ್ನಾನ ಮಾಡುವಾಗ
ಒದಗಿ ನಿತ್ಯಕರ್ಮಗಳನು ನಡೆಸುವಾಗ
ಹೃದಯದಲ್ಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗ
ಸದಮಲಾನಂದ ಹನುಮನನ್ನು ನೆನೆಯಿರೊ

ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ
ಪ್ರೇಮದಿಂದ ವೈಷ್ಣವೋತ್ತಮನರ್ಚಿಸುವಾಗ
ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗ
ನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ

ಕರಗಳನ್ನು ತೊಳೆದು ತೀರ್ಥ ತುಳಸಿದಳವ ಮೆಲ್ಲುವಾಗ
ಪರಿಪರಿಯ ಪುಷ್ಪ ವೀಳ್ಯ ಅರ್ಪಿಸುವಾಗ
ಸರುವಂತರ್ಯಾಮಿ ನಮ್ಮ ಪರಮಗುರು ಮಧ್ವಾಂತರಾತ್ಮಕ
ಸಿರಿ ಪುರಂದರವಿಠಲಗೆ ಸಮರ್ಪಣೆ ಮಾಡಿರೊ



ರಾಗ: ಭೂಪಾಳಿ      ತಾಳ: ಆದಿ

No comments: