ಮಲವ ತೊಳೆಯಬಲ್ಲರಲ್ಲದೆ

ಮಲವ ತೊಳೆಯಬಲ್ಲರಲ್ಲದೆ
ಮನವ ತೊಳೆಯಬಲ್ಲರೆ

ಹಲವು ತೀರ್ಥಂಗಳಲಿ ಮುಳುಗಿ
ಹಲುಬಿದರೆ ಫಲವೇನು

ಭೋಗ ವಿಷಯ ಫಲವನುಂಡು ರಾಗ ಲೋಭದಿಂದ ಮತ್ತ-
ನಾಗಿ ಮೆರೆಯುತಿರೆ ಅವನ ಭಾಗ್ಯವಂತನೆಂಬರೆ

ಯೋಗಿಯಂತೆ ಜನರು ಮೆಚ್ಚುವಂತೆ ಹೋಗಿ ನೀರಿನಲ್ಲಿ
ಕಾಗೆಯಂತೆ ಮುಳುಗೆ ಮಾಘಸ್ನಾನ ಫಲವು ಬಾಹೋದೆ

ಪರರ ಕೇಡು ಬಯಸಿ ಗುರುಹಿರಿಯರನ್ನು ನಿಂದಿಸುತ್ತ
ಪರಮಸೌಖ್ಯವೆಂದು ಪರಸ್ತ್ರೀಯರನ್ನು ಬಯಸುತ್ತ
ಪರಮನಿಷ್ಠ ಮೌನಿಯಂತೆ ಧರೆಯ ಮೇಲೆ ಡಂಭ ತೋರಿ
ಹರಿವ ನೀರಿನ ತೀರದಿ ಕುಳಿತರೇನು ಬಕ ಧ್ಯಾನದಿ

ಕಾಸುವೀಸಕ್ಕಾಗಿ ಹರಿಯದಾಸನೆಂದು ತಿರುಗಿ ತಿರುಗಿ
ದೇಶದೇಶಗಳಲಿ ತೊಳಲಿ ಕಾಶಿಯಾತ್ರೆ ಪೋಗಲು
ಆಶಾಪಾಶ ಬಿಡದೆ ಮನಸು ಹೇಸಿ ವಿಷಯ ಬಯಸುವಂಥ
ವೇಷಧಾರಿಗಳಿಗೆ ಕಾಶಿಯಾತ್ರೆ ಫಲವು ಬಾಹೋದೆ

ತಂದೆತಾಯಿ ತಿರಿದು ತಿನಲು ಒಂದು ದಿನ ಕೇಳಲಿಲ್ಲ
ಮಂದಗಮನೆರೊಡನೆ ಆನಂದದಿಂದಲಿರುವನು
ತಂದೆ ಸತ್ತಮೇಲೆ ನೂರುಮಂದಿ ವಿಪ್ರರಿಗುಣಿಸಿ ತಮ್ಮ
ತಂದೆ ತೃಪ್ತನಾದನೆಂಬರು ಮಂದಮತಿಯ ಜನಗಳು

ಏನು ಓದಲೇನು ಫಲ ಏನು ಕೇಳಲೇನು ಫಲ
ಜ್ಞಾನದಿಂದ ಅಚ್ಯುತನ ಧ್ಯಾನವಿಲ್ಲದವರಿಗೆ
ಮೌನ ನೇಮ ನಿಷ್ಠೆ ಯಾಕೆ ಹೀನಚಿತ್ತನಾದ ಮೇಲೆ
ಶ್ರೀನಿವಾಸ ಪುರಂದರವಿಠಲನು ಮೆಚ್ಚುವನೆ ಮರುಳೆ



ರಾಗ: ಕಾಪಿ (ಸುವ್ವಿಮಟ್ಟು)     ತಾಳ: ಏಕ

No comments: