ವ್ಯಾಸರಾಯರ ಚರಣಕಮಲ - Vyaasaraayara charanakamala


ವ್ಯಾಸರಾಯರ ಚರಣಕಮಲ ದರುಶನವೆನಗೆ
ಯೇಸು ಜನ್ಮದ ಸುಕೃತ ಫಲದಿ ದೊರಕಿತೊ ಎನ್ನ
ಸಾಸಿರ ಕುಲಕೋಟಿಪಾವನ್ನವಾಯಿತು
ಶ್ರೀಶನ ಭಜಿಸುವದಧಿಕಾರಿ ನಾನಾದೆ
ದೋಷ ವಿರಹಿತನಾದ ಪುರಂದರವಿಠಲನ್ನ
ದಾಸರ ಕರುಣವು ಯೆನಮ್ಯಾಲೆ ಇರಲಾಗಿ

ಗುರುವುಪದೇಶವಿಲ್ಲದಾ ಮಂತ್ರ
ಗುರುವುಪದೇಶವಿಲ್ಲದಾ ಭಕ್ತಿ
ಗುರುವುಪದೇಶವಿಲ್ಲದಾ ಕ್ರಿಯೆಗಳು
ಉರಗನ ಉಪವಾಸದಂತೆ ಕಾಣಿರೋ
ಗುರುವ್ಯಾಸರಾಯರ ವರವೆಂದೆನಿಸಿ
ವರಮಹಾಮಂತ್ರವುಪದೇಶವಾಗಿ
ಪುರಂದರವಿಠಲ ಪರನೆಂದೆನಿಸಿ
ದುರಿತ ಭಯಗಳೆಲ್ಲ ಪರಿಹರಿಸಿದನಾಗಿ

ಅಂಕಿತವಿಲ್ಲದ ದೇಹ ನಿಷಿದ್ಧ
ಅಂಕಿತವಿಲ್ಲದ ಕಾಯ ಶೋಭಿಸದು
ಅಂಕಿತವಿಲ್ಲದೆ ಇರಬಾರದೆಂದು ಎನಗೆ ಚ-
ಕ್ರಾಂಕಿತವನು ಮಾಡಿಯೆನಗೆ
ಪಂಕಜನಾಭ ಪುರಂದರವಿಠಲನ್ನ
ಅಂಕಿತವೆನಗಿತ್ತ ಗುರುವ್ಯಾಸ ಮುನಿರಾಯ

ನ್ಯಾಯಾಮೃತ ತರ್ಕತಾಂಡವ ಚಂದ್ರಿಕೆ ಮೊದಲಾದ
ನ್ಯಾಯಗ್ರಂಥಗಳ ರಚಿಸಿ ತನ್ನಯ ಭಕ್ತರಿಗಿತ್ತೆ
ಮಾಯಾವಾದಿ ಮೊದಲಾದ ಇಪ್ಪತ್ತೊಂದು ಕುಭಾಷ್ಯದವರಾ
ಬಾಯ ಮುಚ್ಚಿಸಿದೆ ಮಧ್ವರಾಯರ ಕರುಣದಿಂದ ಸಿ-
ರಿಯರಸ ಪುರಂದರವಿಠಲನ್ನ ಭಕ್ತರೊಳು
ನಾಯಕನೆನಿಸಿಕೊಂಡೆ ರಾಯ ಗುರುವ್ಯಾಸಮುನಿಯೆ

ಶೇಷಾವೇಷ ಪ್ರಹ್ಲಾದನವತಾರನೆನಿಸಿದೆ
ವ್ಯಾಸರಾಯರೆಂಬೊ ಪೆಸರು ನೀನಾಂತೆ
ದೇಶಾಧಿಪಗೆ ಬಂದ ಕುಹುಯೋಗವನು ನೂಕಿ ನೀ ಸಿಂ-
ಹಾಸನವೇರಿ ಮೆರೆದೆ ಜಗವರಿಯೆ
ವ್ಯಾಸಾಬ್ಧಿಯನೆ ಕಟ್ಟಿಸಿ ದೇಶದಾವೊಳಗೆಲ್ಲ
ಭೂಸುರ ಕೀರ್ತಿಯನು ಪಡೆದೆ ಗುರುರಾಯಾ
ವಾಸುದೇವ ಪುರಂದರ ವಿಠಲನ್ನ ದಾಸರೊಳು ಹೆಗ್ಗಳಯೆನಿಸಿಕೊಂಡೆ

ಶ್ರೀನಾರಾಯಣ ಯೋಗಿಯಾದ ಶ್ರೀಪಾದರಾಯರೊಳು
ವಿಹಿತವಾದ ವಿದ್ಯಾಭ್ಯಾಸವ ಮಾಡಿದೆ
ನೀನು ಧರೆಯೊಳು ವಿಜಯೀಂದ್ರವಾದಿರಾಜರೆಂಬೊ
ಪರಮಶಿಷ್ಯರ ಪಡೆದು ಮೆರೆದೆ ಕೀರ್ತಿಯ
ಯೆಲ್ಲ ಸುರೇಂದ್ರ ಪುತ್ರಭಿಕ್ಷವ ಬೇಡಿ ವಿಜಯೀಂದ್ರನ
ಕರುಣಿಸಿದವನನುದ್ಧರಿಸಿದ ಕಾರಣ
ಗುರುವ್ಯಾಸರಾಯರು ಪರಮಗುರುಗಳು
ಪುರಂದರವಿಠಲನೆ ಪರದೈವ ಕಾಣಿರೊ

ಮಾನಸಪೂಜೆಯ ಮಾಡಿ
ದಾನವಾಂತಕ ರಂಗನ್ನ ಮೆಚ್ಚಿ
ತಾನೆ ಬಂದು ಗೋಪಾಲಕೃಷ್ಣನ
ಯೇನೆಂದು ಧ್ಯಾನಿಪೆನೊ
ಯೇನೆಂದು ಪೇಳುವೆ ನಿಮ್ಮ ಮಹಿಮೆಯ
ಜ್ಞಾನಿಗಳರಸ ವ್ಯಾಸಮುನಿರಾಯಾ
ಹೀನ ಜನರು ನಿನ್ನ ಮಾನವನೆಂದು
ನಾನಾ ನರಕಕೆ ಉರುಳುವರು
ಶ್ರೀನಿವಾಸ ಪುರಂದರವಿಠಲನು
ಆನಂದದಿಂದಲಿ ನಿನ್ನ ಮುಂದೆ
ಗಾನವ ಮಾಡುತ್ತ ಆಡುತ್ತಲಿಪ್ಪನು
ಯೇನು ಮಹಿಮೆಯೋದಾವ ಬಲ್ಲನೊ

ಈಸು ಮುನಿಗಳಿದ್ದೇನು ಮಾಡಿದರು ನಮ್ಮ
ವ್ಯಾಸಮುನಿ ಮಧ್ವಮತವನುದ್ಧರಿಸಿ
ಕಾಶಿ ಗದಾಧರಮಿಶ್ರನ ಸೋಲಿಸಿ
ದಾಸನ ಮಾಡಿಕೊಂಡ ಧಾರುಣಿಯೊಳಗೆ
ಕಾಶಿಮಿಶ್ರಪಕ್ಷಧರ ವಾಸುದೇವಾ
ವಾಲಿಲೇಯ ನಾರಸಿಂದ ಯೋಗಿ ಲಿಂಗಣ
ಮಿಶ್ರನೇ ಮೊದಲಾದ ವಿದ್ವಾಂಸರು
ನೂರೆಂಟು ಜಯ ಜಯ ಪತ್ರಿಕೆಯನ್ನು
ವಾಸುದೇವ ಗೋಪಾಲಕೃಷ್ಣನಿಗೆ
ಭೂಷಣವ ಮಾಡಿ ಹಾರಿಸಿದೆ
ಶ್ರೀಶಾ ಪುರಂದರವಿಟ್ಠಲನೆ
ಈಶಯೆಂದಾ ಬ್ರಹ್ಮಾದಿಗಳಿಗೆ
ಈಶನೆಂದು ಡಂಗುರ ಯೊಯ್ಸಿ ಮೆರೆದೆ ಜಗದೊಳಗೆ

ಗುರುವ್ಯಾಸರಾಯರ ಕರುಣ ಕಟಾಕ್ಷದಿ
ಪುರಂದರ ವಿಟ್ಠಲನ್ನ ಚರಣವ ಕಂಡೆ ನಾ


No comments: