ವೃಂದಾವನವೇ ಮಂದಿರವಾಗಿಹ - Vrundaavanave mandiravaagiha

ವೃಂದಾವನವೇ ಮಂದಿರವಾಗಿಹ ಇಂದಿರೆ ಶ್ರೀ ತುಳಸಿ |ಪ|

ನಂದ ನಂದನ ಮುಕುಂದಗೆ ಪ್ರಿಯಳಾದ ಚಂದದ ಶ್ರೀ ತುಳಸಿ  |ಅ.ಪ|

ತುಳಸಿಯ ವನದಲಿ ಹರಿ ಇಹನೆಂಬುದ ಶೃತಿ ಸಾರುತಿದೆ ಕೇಳಿ
ತುಳಸಿ ದರ್ಶನದಿಂದ ದುರಿತಗಳೆಲ್ಲವು ದೂರವಾಗುವುದು ಕೇಳಿ
ತುಳಸಿ ಸ್ಪರ್ಶವ ಮಾಡೆ, ದೇಹಪಾವನವೆಂದು ತಿಳಿದುದಿಲ್ಲವೇ ಪೇಳಿ
ತುಳಸಿ ಸ್ಮರಣೆ ಮಾಡಿ ಸಕಲ ಇಷ್ಟವ ಪಡೆದು ಸುಖದಲಿ ನೀವು ಬಾಳಿ |೧|

ಮೂಲಮೃತ್ತಿಕೆಯನು ಮುಖದಲಿ ಧರಿಸಲು ಮೂರ್ಲೋಕವಶವಹುದು
ಮಾಲೆ ಕೊರಳಲಿಟ್ಟ ಮನುಜಗೆ ಮುಕುತಿಯ ಮಾರ್ಗವು ತೋರುವುದು
ಕಾಲಕಾಲಗಳಲ್ಲಿ ಮಾಡುವ ದುಷ್ಕರ್ಮ ಕಳೆದು ಬಿಸಾಡುವುದು
ಕಾಲನ ದೂತರ ಕಳಚಿ ಕೈವಲ್ಯದ ಲೀಲೆಯ ತೋರುವುದು ||೨||

ಧರೆಯೊಳು ಸುಜನರ ಮರೆಯದೆ ಸಲಹುವ ವರಲಕ್ಷ್ಮೀ ಶ್ರೀ ತುಳಸಿ
ಪರಮಭಕ್ತರ ಘೋರ ಪಾಪಗಳ ತರಿದು ಪಾವನಮಾಡುವ ತುಳಸಿ
ಸಿರಿ ಆಯು ಪುತ್ರಾದಿ ಸಂಪದಗಳನಿತ್ತು ಹರುಷಗೊಳಿಪ ತುಳಸಿ
ಪುರಂದರವಿಠಲನ ಚರಣ ಕಮಲಗಳ ಸ್ಮರಣೆ ಕೊಡುವ ತುಳಸಿ ||೩||


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: