
ನಾರಾಯಣ ನಿಮ್ಮ ನಾಮ ಒಂದಲ್ಲದೆ
ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆ ಬಾಹಳೆ
ದೇವವಿಪ್ರರು ಅಗ್ನಿ ಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರೆಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು
ಇನ್ನಾವ ಗತಿಯಿಂದೆನುತ ಗೋಳಿಡುವಳಲ್ಲದೆ
ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ದು ಹಾಕೆಂಬರು
ಎತ್ತಿದ ಕಸಕ್ಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ
ಪುತ್ರ ಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯು ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು
ಯಮನು ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ
ರಾಗ: ಮೋಹನ ತಾಳ: ಅಟ್ಟ
No comments:
Post a Comment