ಮೋಸ ಹೋದೆನಲ್ಲಾ

ಮೋಸ ಹೋದೆನಲ್ಲಾ ತಿಳಿಯದೆ ಮೋಸ ಹೋದೆನಲ್ಲಾ

ಕ್ಲೇಶಪಾಶವನು ನಾಶಮಾಡುವ
ಶ್ರೀಶನಂಘ್ರಿಗಳ ಲೇಸಾಗಿ ಸ್ಮರಿಸದೆ

ಕಾಯದಾಶೆಯಿಂದ ಕಂಡದ್ದು ಬೇಡಿ ಶ್ವಾನನಂತೆ
ಮಾಯಪಾಶದಲಿ ಸಿಲುಕಿ ನಾನು ಮಾರಮಣನೆ ನಿನ್ನ ಧ್ಯಾನಮಾಡದೇ

ಪುಷ್ಪ ಜಾಜಿಗಳನು ಮಲ್ಲಿಗೆ ಭಕ್ತಿಭಾವದಿಂದ ತಂದು
ಕೃಷ್ಣಾವತಾರನ ಪೂಜೆಯ ಮಾಡಿ ವಿಷ್ಣುಲೋಕವನು ಸೂರೆಗೊಳ್ಳದೆ

ಸತಿಸುತಾದಿ ಬಂಧುಬಳಗ ಹಿತವ ನುಡಿವರ್ಯಾರೋ
ಗತಿ ನೀನೆ ತಂದೆತಾಯಿ ನೀನೆ ಸದ್ಗತಿ ಈಯೋ ಪುರಂದರವಿಟ್ಠಲ


ರಾಗ: ಧನ್ಯಾಸಿ                                               ತಾಳ: ಆದಿ

No comments: