ಸಜ್ಜನರ ಸಂಗ - Sajjanara sanga

ಸಜ್ಜನರ ಸಂಗ ನಮಗೆಂದಿಗಾಗುವುದೊ
ದುರ್ಜನರ ಸಂಗದಿಂದಲಿ ನೊಂದೆ ಹರಿಯೆ

ವಾಕು ವಾಕಿಗೆ ಡೊಂಕನೆಣಿಸುವರು ಮತ್ತೆ
ಪೋಕರಾಡಿದ ಮಾತು ನಿಜವೆಂಬರು
ವಾಕುಶೂಲಗಳಿಂದ ನೆಡುವರು ಪರರನೀ
ಪೋಕುಮಾನವರಿಂದ ನೊಂದೆ ಹರಿಯೆ

ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು
ನ್ಯಾಯವಿಲ್ಲದೆ ನುಡಿವರು ಪರರ
ಭಾವಿಸಲರಿಯರು ಗುರುಹಿರಿಯರನಿಂಥ
ಹೇಯ ಮನುಜರಿಂದ ನೊಂದೆ ಹರಿಯೆ

ಬಡಜನರನು ಕೊಂದು ಅಡಗಿಸಿಕೊಂಬರು
ಬಿಡಲೊಲ್ಲರು ಹಿಡಿದನ್ಯಾಯವ
ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥ
ಕಡುಮೂರ್ಖರಿಂದ ನಾ ನೊಂದೆನು ಹರಿಯೆ

ತೊತ್ತಿನೊಡನೆ ತನ್ನ ಸ್ನೇಹಸರಸ ಮಾತು
ತೆತ್ತಿಗರೊಡನೆ ಪಂಥವ ನುಡಿವರು
ಸತ್ತ ಬಳಿಕ ಸೃಷ್ಠಿ ಸಟೆಯೆಂಬರು ಇಂಥ
ಮತ್ತ ಮನುಜರಿಂದ ನೊಂದೆ ಶ್ರೀಹರಿಯೆ

ಇಷ್ಟು ದಿನವು ನಿನ್ನ ನೆನೆಯದ ಕಾರಣ
ಕಷ್ಟಪಡುವ ಕೈಮೇಲಾಗಿ
ಸೃಷ್ಠಿಗೊಡೆಯ ಶ್ರೀಪುರಂದರವಿಠಲನೆ
ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ