ಎರವಿನ ಸಿರಿಗೆ ಬಿಮ್ಮನೆ ಬೆರೆತ


















ಎರವಿನ ಸಿರಿಗೆ ಬಿಮ್ಮನೆ ಬೆರೆತರೆ ನೀರ 
ಕಡೆದರುಂಟೆ  ಬೆಣ್ಣೆ ಜೀವವೆ 
ಉರಗನ ಹೆಡೆಯ ನೆಳಲ ಸೇರಿದ ಕಪ್ಪೆ 
ಸ್ತಿರಕಾಲ ಬಾಳ್ವುದೆ ಜೀವವೆ 

ಸತಿ ಸುತರೆಂದು ನೆಚ್ಚಲು ಬೇಡ ಮನದೊಳು 
ಹಿತವರೊಬ್ಬರ ಕಾಣೆ ಜೀವವೆ 
ವೃಥಾ ನೀನು ಕೆಡಬೇಡ ಮರಣವು ತಪ್ಪದು 
ನಾಥ ದಶಕಂಠಗಾದರು ಜೀವವೆ 

ಆಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡನ್ಯ-
ಸ್ತ್ರಿಸಂಗವು ಬೇಡ ಜೀವವೆ 
ಏಸೇಸು ಜನ್ಮಾಂತರ ಕಳೆದುಳಿದರು 
ಈ ಸಾವು ತಪ್ಪದು ಜೀವವೆ 

ಆನೆ ಕುದುರೆ ಮಂದಿ ಶಾನೆ ಭಂಡಾರವು 
ಏನು ಪಡೆದರಿಲ್ಲ ಜೀವವೆ 
ಮಾನ ಸಹ ಸರ್ವ ಹರಿಗೆ ಅರ್ಪಣ ಮಾಡಿ 
ಪುನಿತನಾಗಿರು ಜೀವವೆ 

ಕೆರೆಯ ಕಟ್ಟಿಸು ಮತ್ತೆ ಪೂದೋಟ ಹಾಕಿಸು 
ಸೆರೆಯ ಬಿಡಿಸಲದು ಪುಣ್ಯ ಜೀವವೆ 
ಕರೆಯದೆ ಮನೆಗೆ ಬಂದವರಿಗನ್ನವ ನೀಡು 
ಪರಲೋಕ ಸಾಧನವದು ಜೀವವೆ 

ಸತ್ಯವಂತರ ಸಂಗದೊಳಗೆ ಚರಿಸೆ ಮೃತ್ಯು 
ಅತ್ತತ್ತಲಿರುವಳು ಜೀವವೆ 
ಸತ್ಯವಂತ ಸಿರಿಪುರಂದರವಿಠಲನೆನ್ನು 
ಸತ್ತು ಹುಟ್ಟುವುದಿಲ್ಲ ಜೀವವೆ 

No comments: