ರಾಗಿ ತಂದೀರಾ ಭಿಕ್ಷಕೆ

ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು

ಅನ್ನದಾನವ ಮಾಡುವರಾಗಿ
ಅನ್ನ ಛತ್ರವನ್ನಿಟ್ಟವರಾಗಿ
ಅನ್ಯ ವಾರ್ತೆಯ ಬಿಟ್ಟವರಾಗಿ
ಅನುದಿನ ಭಜನೆಯ ಮಾಡುವರಾಗಿ

ಮಾತಾಪಿತೃಗಳ ಸೇವಿಪರಾಗಿ
ಪಾಪ ಕಾರ್ಯದ ಬಿಟ್ಟವರಾಗಿ
ಜಾತಿಯಲಿ ಮಿಗಿಲಾದವರಾಗಿ
ನೀತಿ ಮಾರ್ಗದಲಿ ಖ್ಯಾತರಾಗಿ

ಗುರು ಕಾರುಣ್ಯವ ಪಡೆದವರಾಗಿ
ಗುರುವಿನ ಮರ್ಮವ ತಿಳಿದವರಾಗಿ
ಗುರುವಿನ ಪಾದವ ಸ್ಮರಿಸುವರಾಗಿ
ಪರಮ ಪುಣ್ಯವ ಮಾಡುವರಾಗಿ

ಶ್ರೀನಿವಾಸನ ಸ್ಮರಿಸುವರಾಗಿ
ಪ್ರಾಣರಾಯನ ದಾಸರಾಗಿ
ದಾನಕೆಂದು ಬಲು ಹೆದರಿ ಇಂಥ
ದೀನವೃತ್ತಿಯಲಿ ಹೀನರಾಗಿ

ಪಕ್ಷಮಾಸ ವ್ರತ ಮಾಡುವರಾಗಿ
ಪಕ್ಷಿವಾಹನಗೆ ಪ್ರಿಯರಾಗಿ
ಕುಕ್ಷಿಲಿ ಕಲ್ಮಷ ಇಲ್ಲದವರಾಗಿ
ಭಿಕ್ಷುಕರು ಅತಿ ತುಚ್ಛರಾಗಿ

ವೇದ ಪುರಾಣದ ತಿಳಿದವರಾಗಿ
ಮೇದಿನಿಯಾಳುವಂಥವರಾಗಿ
ಸಾಧು ಧರ್ಮವಾಚರಿಸುವರಾಗಿ
ಓದಿ ಗ್ರಂಥಗಳ ಪಂಡಿತರಾಗಿ

ಆರು ಮಾರ್ಗವ ಅರಿತವರಾಗಿ
ಮೂರು ಮಾರ್ಗವ ತಿಳಿದವರಾಗಿ
ಭೂರಿ ತತ್ತ್ವವ ಬೆರೆದವರಾಗಿ
ಕ್ರೂರರ ಸಂಗವ ಬಿಟ್ಟವರಾಗಿ

ಕಾಮ ಕ್ರೋಧವ ಅಳಿದವರಾಗಿ
ನೇಮ ನಿಷ್ಠೆಗಳ ಮಾಡುವರಾಗಿ
ಆ ಮಹಾಪದವಿಲಿ ಸುಖಿಸುವರಾಗಿ
ಪ್ರೇಮದಿ ಕುಣಿ ಕುಣಿದಾಡುವರಾಗಿ

ಸಿರಿ ರಮಣನ ಸದಾ ಸ್ಮರಿಸುವರಾಗಿ
ಗುರುತಿಗೆ ಬಾಹೋರಂಥವರಾಗಿ
ಕರೆಕರೆ ಸಂಸಾರ ನೀಗುವರಾಗಿ
ಪುರಂದರವಿಠಲನ ಸೇವಿಪರಾಗಿ

ರಾಗ: ನಾದನಾಮಕ್ರಿಯೆ        ತಾಳ: ಛಾಪು

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


No comments: