ಪಾಪಿ ಬಲ್ಲನೆ ಪರರ ಸುಖ ದುಃಖವ

ಪಾಪಿ ಬಲ್ಲನೆ ಪರರ ಸುಖ ದುಃಖವ

ಕೋಪಿ ಬಲ್ಲನೆ ಶಾಂತ ಸುಗುಣದ ಘನವ
ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನು

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ತಾನು ಬಲ್ಲುದೆ ಹಾವು ಹಾಲನೆರೆದವರನು

ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು
ಸೂಳೆ ಬಲ್ಲಳೆ ವಿಟನ ಬಡತನವನು
ಕೇಳಬಲ್ಲನೆ ಕಿವುಡನೇಕಾಂತ ಮಾತುಗಳ
ಹೇಳಬಲ್ಲನೆ ಮೂಕ ಕನಸು ಕಂಡುದನು

ಕಾಗೆ ಬಲ್ಲುದೆ ಒಳ್ಳೆ ಕೋಗಿಲೆಯ ಸುಸ್ವರವ
ಗೂಗೆ ಬಲ್ಲುದೆ ಹಗಲು ಹರಿದಾಟವ
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಷಡ್ರಸಾನ್ನರುಚಿಯ

ಕೋಡಗವು ಬಲ್ಲುದೆ ರತ್ನದಾಭರಣವನು
ಹೇಡಿ ಬಲ್ಲನೆ ರಣದ ಸಂಭ್ರಮವನು
ಬೇಡಿದ ವರಗಳ ಪುರಂದರವಿಠಲನಲ್ಲದೆ
ನಾಡಾಡಿ ದೈವಗಳು ಕೊಡಬಲ್ಲುವೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

No comments: