ಬೇವು ಬೆಲ್ಲದೊಳಿಡಲೇನು ಫಲ

ಬೇವು ಬೆಲ್ಲದೊಳಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ

ಕುಟಿಲವ ಬಿಡದಿಹ ಮನುಜರು ಮಂತ್ರವ
ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಸಂತತ
ನಟನೆಯ ಮಾಡಿದರೇನು ಫಲ

ಕಪಟತನದಲಿ ಕಾಡುತ ಜನರನು
ಜಪವನು ಮಾಡಿದರೇನು ಫಲ
ಕುಪಿತ ತನುವನು ಬಿಡದೆ ನಿರಂತರ
ಜಪವನು ಮಾಡಿದರೇನು ಫಲ

ಮಾತಾಪಿತರನು ಬಳಲಿಸಿದಾತನು
ಯಾತ್ರೆಯ ಮಾಡಿದರೇನು ಫಲ
ಘಾತಕತನವನು ಬಿಡದೆ ನಿರಂತರ
ಗೀತೆಯನೋದಿದರೇನು ಫಲ

ಪತಿಗಳ ನಿಂದಿಪ ಸತಿಯರು ಬಹು ವಿಧ
ವ್ರತಗಳ ಮಾಡಿದರೇನು ಫಲ
ಅತಿಥಿಗಳೆಡೆಯಲಿ ಭೇದವ ಮಾಡುತ
ಗತಿಯನು ಬಯಸಿದರೇನು ಫಲ

ಹೀನ ಗುಣಂಗಳು ಹಿಂಗದೆ ಗಂಗೆಯ
ಸ್ನಾನವ ಮಾಡಿದರೇನು ಫಲ
ಶ್ರೀನಿಧಿ ಪುರಂದರವಿಠಲನ ನೆನೆಯದೆ
ಮೌನವ ಮಾಡಿದರೇನು ಫಲ

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ

ಬುದ್ಧಿ ಮಾತು ಹೇಳಿದರೆ ಕೇಳಬೇಕಮ್ಮ ಮಗಳೆ ಮನ
ಶುದ್ಧಳಾಗಿ ಗಂಡನೊಡನೆ ಬಾಳಬೇಕಮ್ಮ

ಅತ್ತೆ ಮಾವಗಂಜಿಕೊಂಡು ನಡೆಯಬೇಕಮ್ಮ ಮಗಳೆ
ಚಿತ್ತದೊಲ್ಲಭನ ಅಕ್ಕರೆಯನ್ನು ಪಡೆಯಬೇಕಮ್ಮ
ಹೊತ್ತು ಹೊತ್ತಿಗೆ ಮನೆಯ ಕೆಲಸ ಮಾಡಬೇಕಮ್ಮ ಮಗಳೆ
ಹತ್ತುಮಂದಿ ಒಪ್ಪುವ ಹಾಗೆ ನುಡಿಯಬೇಕಮ್ಮ

ಕೊಟ್ಟು ಕೊಂಬುವ ನಂಟರೊಡನೆ ದ್ವೇಷ ಬೇಡಮ್ಮ ಮಗಳೆ
ಅಟ್ಟು ಉಂಬುವ ಕಾಲದಲ್ಲಿ ಆಟ ಬೇಡಮ್ಮ
ಹಟ್ಟಿ ಬಾಗಿಲಲ್ಲಿ ಬಂದು ನಿಲ್ಲಬೇಡಮ್ಮ ಮಗಳೆ
ಕಟ್ಟಿ ಆಳುವ ಗಂಡನೊಡನೆ ಸಿಟ್ಟು ಬೇಡಮ್ಮ

ನೆರೆಹೊರೆಯವರಿಗೆ ನ್ಯಾಯವನ್ನು ಹೇಳಬೇಡಮ್ಮ ಮಗಳೆ
ಗರುವ ಕೋಪ ಮತ್ಸರವನ್ನು ಮಾಡಬೇಡಮ್ಮ
ಪರರ ನಿಂದಿಪ ಹೆಂಗಳೊಡನೆ ಸೇರಬೇಡಮ್ಮ ಮಗಳೆ
ವರಪುರಂದರವಿಠಲನ ಸ್ಮರಣೆ ಮರೆಯಬೇಡಮ್ಮ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಿನ್ನಹಕೆ ಬಾಯಿಲ್ಲವಯ್ಯಾ

ಬಿನ್ನಹಕೆ ಬಾಯಿಲ್ಲವಯ್ಯಾ
ಅನಂತ ಅಪರಾಧ ಎನ್ನಲ್ಲಿ ಇರಲಾಗಿ

ಅಸುರಾರಿ ನಿನ್ನ ಮರೆತೆನೊ ಕಾಯೊ ಹರಿಯೆ

ಶಿಶು ಮೋಹ ಸತಿ ಮೋಹ ಜನನಿ ಜನಕರ ಮೋಹ
ರಸಿಕ ಭ್ರಾಂತಿಯ ಮೋಹ ರಾಜಮನ್ನಣೆ ಮೋಹ
ಪಶುಮೋಹ ಭೂಮೋಹ ಬಂಧುವರ್ಗದ ಮೋಹ
ಹಸನುಳ್ಳ ಆಭರಣಗಳ ಮೋಹದಿಂದ

ಅನ್ನಮದ ಅರ್ಥಮದ ಅಖಿಳ ವೈಭವದ ಮದ
ಮುನ್ನ ಪ್ರಾಯದ ಮದವು ರೂಪಮದವು
ತನ್ನ ಸತ್ವದ ಮದ ಧಾತ್ರಿ ವಶವಾದ ಮದ
ಇನ್ನು ತನಗೆದುರಿಲ್ಲವೆಂತೆಂಬ ಮದದಿಂದ

ಇಷ್ಟು ದೊರಕಿದರೆ ಮತ್ತಿಷ್ಟು ಬೇಕೆಂಬಾಸೆ
ಅಷ್ಟು ದೊರಕಿದರು ಮತ್ತಷ್ಟರಾಸೆ
ಕಷ್ಟ ಬೇಡೆಂಬಾಸೆ ಕಡುಸುಖವ ಕಾಂಬಾಸೆ
ನಷ್ಟಜೀವನದಾಸೆ ಪುರಂದರವಿಠಲ




1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಈ ಕೀರ್ತನೆಯ ಆಂಗ್ಲ ಭಾಷಾಂತರಕ್ಕೆ ಇಲ್ಲಿ ಕ್ಲಿಕ್ ಮಾಡಿ

ಬಾರೋ ಬ್ರಹ್ಮಾದಿವಂದ್ಯಾ

ಬಾರೋ ಬ್ರಹ್ಮಾದಿವಂದ್ಯಾ
ಬಾರೋ ವಸುದೇವ ಕಂದ

ಧಿಗಿಧಿಗಿ ನೀ ಕುಣಿದಾಡುತ ಬಾರೋ ದೀನರಕ್ಷಕನೇ
ಜಗದೀಶಾ ಕುಣಿದಾಡುತ ಬಾರೋ ಚೆನ್ನಕೇಶವನೇ

ಗೊಲ್ಲರ ಮನೆಗೆ ಪೋಗಲು ಬೇಡ ಗೋವಿಂದಾ ಕೇಳೋ
ಹಾಲು ಬೆಣ್ಣೆ ಮೊಸರಿಕ್ಕುವೆ ನೀನುಣ್ಣಬಾರೋ

ದೊಡ್ಡ ದೊಡ್ಡ ಮುತ್ತಿನ ಹಾರವ ಹಾಕಿ ನೋಡುವೆ ಬಾರೋ
ದೊಡ್ಡಪುರದ ದ್ವಾರಕಿವಾಸ ಪುರಂದರವಿಟ್ಠಲ


ಬಾರಯ್ಯ ವೆಂಕಟರಮಣ

ಬಾರಯ್ಯ ವೆಂಕಟರಮಣ-ಭಕ್ತರ ನಿಧಿಯೆ
ಬಾರೋ ವಿಶ್ವಂಭರಣ

ತೋರೋ ನಿನ್ನಯ ದಯೆ ತೋಯಜಾಂಬಕನೆ

ವೇದಗೋಚರ ಬಾರೋ ಆದಿಕಚ್ಛಪ ಬಾರೋ
ಮೋದಗೋಚರ ಬಾರೋ ಸದಯ ನರಸಿಂಹ ಬಾರೋ

ವಾಮನ ಭಾರ್ಗವ ಬಾರೋ ರಾಮ ಕೃಷ್ಣನೆ ಬಾರೋ
ಪ್ರೇಮದ ಬುದ್ಧನೆ ಬಾರೋ ಸ್ವಾಮಿ ಕಲ್ಕಿಯೆ ಬಾರೋ

ಅರವಿಂದನಾಭ ಬಾರೋ ಸುರರ ಪ್ರಭುವೆ ಬಾರೋ
ಪುರುಹೂತವಂದ್ಯ ಬಾರೋ ಪುರಂದರವಿಠಲ ಬಾರೋ



ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಾ ಬಾ ರಂಗ ಭುಜಂಗಶಯನ

ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ

ಬಾ ಬಾ ಎನ್ನಂತರಂಗ ಮಲ್ಲರಗಜ ಸಿಂಗ ದುರಿತ ಭವಭಂಗ

ಉಭಯ ಕಾವೇರಿಯ ಮಧ್ಯನಿವಾಸ
ಅಭಯದಾಯಕ ಮಂದಹಾಸ
ಸಭೆಯೊಳು ಸತಿಯಳ ಕಾಯಿದ ಉಲ್ಲಾಸ
ಇಭವರದನೆ ಶ್ರೀನಿವಾಸ

ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ
ಗಾಳಿಯ ದೇವರ ದೇವ
ಸೋಳಸಾಸಿರ ಗೋಪಿಯರಾಳಿದ ಈ-
ರೇಳು ಲೋಕದ ಜನ ಕಾವ

ಚಂದ್ರ ಪುಷ್ಕರಿಣಿಯ ತೀರವಿಹಾರ
ಇಂದ್ರಾದಿ ಸುರ ಪರಿವಾರ
ಚಂದ್ರಶೇಖರ ನುತನಾದ ಸುಖ-
ಸಾಂದ್ರ ಸುಗುಣ ಗಂಭೀರ

ಈಷಣತ್ರಯಗಳ ದೂಷಿತ ನಿರತ ಅ-
ಶೇಷ ವಿಭವ ಜನಪಾಲ
ಭೂಷಿತ ನಾನಾ ವಸ್ತ್ರಾಭರಣ ವಿ-
ಭೀಷಿಣಗೊಲಿದ ಸುಪ್ರಾಣ

ಶಂಬರಾರಿಯ ಪಿತ ಡಂಬರಹಿತ ಮನ
ಅಂಬುಜದಳನಿಭನೇತ್ರ
ಕಂಬುಚಕ್ರಧರ ಪುರಂದರವಿಠಲ
ತುಂಬುರು ನಾರದಕೃತ ಸ್ತೋತ್ರ

ಬಣ್ಣಿಸಿ ಗೋಪಿ ಹರಸಿದಳು

ಬಣ್ಣಿಸಿ ಗೋಪಿ ಹರಸಿದಳು

ಎಣ್ಣೆಯನೊತ್ತುತ ಯದುಕುಲ ತಿಲಕಗೆ

ಆಯುಷ್ಯವಂತನಾಗು ಅತಿ ಬಲ್ಲಿದನಾಗು
ಮಾಯದ ಖಳರ ಮರ್ದನನಾಗು
ರಾಯರ ಪಾಲಿಸು ರಕ್ಕಸರ ಸೋಲಿಸು
ವಾಯುಸುತಗೆ ನೀನೊಡೆಯನಾಗೆನುತ

ಧೀರನು ನೀನಾಗು ದಯಾಂಬುಧಿಯಾಗು
ಆ ರುಕ್ಮಿಣಿಗೆ ನೀನರಸನಾಗು
ಮಾರನ ಪಿತನಾಗು ಮಧುಸೂದನನಾಗು
ದ್ವಾರಾವತಿಗೆ ನೀ ಧೊರೆಯಾಗೆನುತ

ಆನಂದ ನೀನಾಗು ಅಚ್ಯುತ ನೀನಾಗು
ದಾನವಾಂತಕನಾಗು ದಯವಾಗು
ಶ್ರೀನಿವಾಸನಾಗು ಶ್ರೀನಿಧಿ ನೀನಾಗು
ಜ್ಞಾನಿ ಪುರಂದರವಿಠಲನಾಗೆನುತ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ

ಬಂದು ನಿಂತಿಹ ನೋಡಿ ಭೂತಳದಿ ವೆಂಕಟ
ಇಂದಿರೆಯ ಒಡಗೂಡಿ ಒಪ್ಪುವ ನಿರಂತರ
ಪೊಂದಿ ಭಜನೆಯ ಮಾಡಿ ಆನಂದಗೂಡಿ
ವಂದಿಸುತ ಮನದೊಳಗೆ ಇವನಡಿ
ದ್ವಂದ್ವ ಭಜಿಸಲು ಬಂದ ಭಯಹರ
ಇಂದುಧರ ಸುರವೃಂದನುತ ಗೋ-
ವಿಂದ ಘನ ದಯಾಸಿಂಧು ಶ್ರೀಹರಿ

ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು
ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ-
ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ
ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ
ವಾರವಾರಕೆ ಪೂಜೆಗೊಂಬುವ
ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ-
ಯೂರಭೂಷಿತ ಮಾರಪಿತ ಗುಣ ಮೋಹನಾಂಗ
ಚಾರು ಪೀತಾಂಬರ ಕಟಿ ಕರವೀರ ಕ-
ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು-
ತಿರೆ ವದನಾರವಿಂದನು ನಗುತ ನಲಿಯುತ

ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ ಕೈ-
ವಲ್ಯಸ್ಥಾನವ ಬಿಟ್ಟ ಶೇಷಾದ್ರಿ ಮಂದಿರ
ದಲ್ಲಿ ಲೋಲುಪ ದಿಟ್ಟ ಸೌಭಾಗ್ಯನಿಧಿಗೆದು-
ರಿಲ್ಲ ಭುಜಬಲ ಪುಷ್ಪ ಕಸ್ತೂರಿಯಿಟ್ಟ
ಚೆಲ್ವ ಫಣಿಯಲಿ ಶೋಭಿಸುವ ಸಿರಿ-
ವಲ್ಲಭನ ಗುಣ ಪೊಗಳದಿಹ ಜಗ ಖುಲ್ಲರೆದೆದಲ್ಲಣ ಪರಾಕ್ರಮ
ಮಲ್ಲಮರ್ದನ ಮಾತುಳಾರಿ ಫಲ್ಗುಣನ ಸಖ ಪ್ರಕಟನಾಗಿಹ
ದುರ್ಲಭನು ಅಘದೂರ ಬಹುಮಾಂಗಲ್ಯು ಹೃದಯನು ಸೃಷ್ಟಿಗೆ
ಉಲ್ಲಾಸ ಕೊಡುತಲಿ ಚಂದದಿಂದಲಿ

ಪದಕ ಕೌಸ್ತುಭಧಾರ ಸರಿಗೆಯ ಕಂಧರ
ಸುದರುಶನದರಧಾರ ಸುಂದರ ಮನೋಹರ
ಪದಯುಗದಿ ನೂಪುರ ಇಟ್ಟಿಹನು
ಸನ್ಮುನಿ ಹೃದಯಸ್ಥಿತ ಗಂಭೀರ ಬಹು ದಾನಶೂರ
ವಿಧಿ ಭವಾದ್ಯರ ಪೊರೆವ ದಾತನು
ತುದಿ ಮೊದಲು ಮಧ್ಯಮ ವಿರಹಿತನು ಉದುಭವಾದಿಗಳೀವ ಕರ್ತನು
ತ್ರಿದಶಪೂಜಿತ ತ್ರಿಭುವನೇಶ ಸದುವಿಲಾಸದಿ ಸ್ವಾಮಿತೀರ್ಥದಿ
ಉದಿಸುತಿರೆ ಸಿರಿ ಮಹಿಳೆ ಸಹಿತದಿ ಪದುಮನಾಭ ಪುರಂದರವಿಟ್ಠಲ ಪ್ರತಿ ವರುಷ ಬ್ರಹ್ಮೋತ್ಸವದಿ ಮೆರೆಯುತ

ಬಂದದ್ದೆಲ್ಲ ಬರಲಿ

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ

ಇಂದಿರೆ ರಮಣನ ಧ್ಯಾನವ ಮಾಡಲು
ಬಂದ ದುರಿತ ಬಯಲಾದುದಿಲ್ಲವೆ

ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು
ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು
ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ
ಘೋರ ದುರಿತ ಬಯಲಾದುದಿಲ್ಲವೆ?

ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ
ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ
ಶ್ರೀರಮಣನ ಸಿರಿ ಚರಣ ಶರಣರಿಗೆ
ಕ್ರೂರ ಯಮನು ಶರಣಾಗಲಿಲ್ಲವೆ?

ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು-
ಭಾಂಗನ ದಯವೊಂದಿದ್ದರೆ ಸಾಲದೆ

ಫಲಾಹಾರವನು ಮಾಡೊ ಪರಮಪುರುಷ

ಫಲಾಹಾರವನು ಮಾಡೊ ಪರಮಪುರುಷ ಭೂ-
ಬಲನೆ ಲಕ್ಷ್ಮೀ ಕಂದರ್ಪರ ಸಹಿತ

ಕದಳಿ ಕೆಂಬಾಳೆ ಕಿತ್ತಳೆ ಕಂಚಿಫಲಗಳು
ಬದರಿ ಬೆಳುವಲ ಜಂಬೀರ ದ್ರಾಕ್ಷೆಗಳು
ಮಧುರದ ಮಾದಾಳ ಮಾವಿನ ಹಣ್ಗಳು
ತುದಿ ಮೊದಲಿಲ್ಲದ ಪರಿಪರಿ ಫಲಗಳ

ಉತ್ತತ್ತಿ ಜಂಬು ನಾರಂಗ ದಾಳಿಂಬವು
ಮುತ್ತಾದೌದುಂಬರ ಕಾರಿಯು ಕವಳಿ
ಕತ್ತರಿಸಿದ ಕಬ್ಬು ಪಲಸು ತೆಂಗಿನಕಾಯಿ
ಒತ್ತಿದ ಬೇಳೆ ನೆಲಗಡಲೆ ಖಜ್ಜೂರ ಹಣ್ಣ

ಹಾಲು ಸಕ್ಕರೆ ಜೇನುತುಪ್ಪ ಸೀಕರಣೆಯು
ಹಾಲು ರಸಾಯನ ಬೆಣ್ಣೆ ಸೀಯಾಳು
ಮೂಲೋಕದೊಡೆಯ ಶ್ರೀಪುರಂದರವಿಠಲನೆ
ಪಾಲಿಸೋ ನಿನ್ನಯ ಕರಕುಂಜದಿಂದಲಿ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ಪೊಂಗೊಳಲನೂದುತಿಹ ಯದುಕುಲೋತ್ತುಂಗ

ತಿಂಗಳಾಪಾಂಗ ನೀರಾಜಿತ ಶುಭಾಂಗ

ಸಲಿಲಗಾಚಲಧರನೆ ಇಳೆಯಾಣ್ಮ ಜ್ವಲನೇತ್ರ
ಬಲಿಯ ಬೇಡಿದೆ ಭೃಗುಕುಲಜನೆನಿಸಿ
ಬಲಿದ ಬಿಲ್ಲನೆ ಮುರಿದು ಲಲನೆಯರ ವಶನಾಗಿ
ಖಳರ ಸಂಭೋಧಿಸಿದೆ ಚೆಲುವ ಹಯವೇರಿ

ಬಿಡದೆ ನೋಡಿದೆ ಬೆಟ್ಟದಡಿಗೆ ಬೆನ್ನನು ಕೊಟ್ಟೆ
ಅಡವಿಚರ ಕಡುಕೋಪಿ ಕೊಡೆಯ ಪಿಡಿದು
ಕೊಡಲಿಕೈ ಜಡೆ ಧರಿಸಿ ಗಿಡ ಹತ್ತಿ ಕೆಡಿಸಿ ಸ-
ನ್ಮಡದಿಯರ ಹಯವೇರಿ ಕಡಿದೆ ರಣಶೂರ

ವಾರಿಚರ ಕೂರ್ಮಾವತಾರ ಸೂಕರ ಹರಿಯೆ
ಧಾರುಣೆಯನಳೆದೆ ಶೂರರನು ಗೆಲಿದೆ
ನೀರಜಾಕ್ಷಿಯ ತಂದೆ ಚೋರ ವ್ರತವನಳಿದೆ ಹಯ-
ವೇರಿದನೆ ಪುರಂದರವಿಠಲ ಜಗದಯ್ಯ


ಪುಟ್ಟಿಸಬೇಡವೊ ದೇವ ಎಂದೆಂದಿಗೂ

ಪುಟ್ಟಿಸಬೇಡವೊ ದೇವ ಎಂದೆಂದಿಗೂ ಇಂಥ

ಕಷ್ಟಪಟ್ಟು ತಿರುಗುವ ಪಾಪಿ ಜೀವನವ

ನರರ ತುತಿಸಿ ನಾಲಗೆ ಬರಡು ಮಾಡಿ ಉ-
ದರ ಪೋಷಣೆಗಾಗಿ ಅವರಿವರೆನ್ನದೆ
ಧರೆಯೊಳು ಲಜ್ಜೆ ನಾಚಿಕೆಗಳನೀಡಾಡಿ
ಪರರ ಪೀಡಿಸಿ ತಿಂಬ ಪಾಪಿ ಜೀವನವ

ಎಂಟು ಗೇಣು ಶರೀರ ಒಂದು ಗೇಣು ಮಾಡಿಕೊಂಡು
ಪಂಟಿಸುತ್ತ ಮೆಲ್ಲ ಮೆಲ್ಲನೆ ಪೋಗಿ
ಗಂಟಲ ಸೆರೆಗಳುಬ್ಬಿ ಕೇಳುವ ಸಂಕಟ ವೈ-
ಕುಂಠಪತಿ ನೀನೆ ಬಲ್ಲೆ ಕಪಟನಾಟಕನೆ

ಲೆಖ್ಖದಲಿ ನೀ ಮೊದಲು ಮಾಡಿದ್ದಲ್ಲದೆ
ಸಖ್ಯಕೆ ವೆಗ್ಗಳ ಕೊಡುವರುಂಟೆ
ಕಕ್ಕುಲಾತಿಪಟ್ಟರಿಲ್ಲ ಕರುಣಾಳು ನಿನ್ನ ಮೊರೆ
ಹೊಕ್ಕೆ ಎನ್ನನು ಕಾಯೊ ಪುರಂದರವಿಠಲ

ಪಾಲಿಸೆಮ್ಮ ಮುದ್ದು ಶಾರದೆ

ಪಾಲಿಸೆಮ್ಮ ಮುದ್ದು ಶಾರದೆ ಎನ್ನ ನಾಲಿಗೆಯಲಿ ನಿಲ್ಲ ಬಾರದೆ || ಪಲ್ಲವಿ ||

ಲೋಲಲೋಚನೆ ತಾಯೆ ನಿರುತ ನಂಬಿದೆ ನಿನ್ನ || ಅನುಪಲ್ಲವಿ ||

ಅಕ್ಷರಕ್ಷರ ವಿವೇಕವಾ ನಿನ್ನ ಕುಕ್ಷಿಯೊಳಿರೆ
ಏಳು ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ || ೧ ||

ಶೃಂಗಾರಪುರ ನೆಲೆವಾಸಿನೀ ದೇವಿ
ಸಂಗೀತಗಾನ ವಿಲಾಸಿನೀ
ಮಂಗಳಗಾತ್ರೆ ತಾಯೆ ಭಳಿರೆ ಬ್ರಹ್ಮನ ರಾಣಿ || ೨ ||

ಸರ್ವಾಲಂಕಾರ ದಯಾಮೂರುತಿ ನಿನ್ನ
ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ || ೩ ||

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ


ಪಾಲಿಸೆ ಎನ್ನ ಶ್ರೀಮಹಾಲಕ್ಷ್ಮಿ
ಪಾಲಿಸೆ ಎನ್ನನು ಪಾಲಾಬ್ಧಿ ಸಂಜಾತೆ

ಲಲಿತಾಂಗಿ ಶುಭೆ ದೇವಿ ಮಂಗಳೆ ದೇವಿ

ವೇದಾಭಿಮಾನಿ ಸಾರಸಾಕ್ಷಿ
ಶ್ರೀಧರರಮಣಿ
ಕಾದುಕೊ ನಿನ್ನಯ ಪಾದಸೇವಕರನ್ನು
ಆದಿಶಕ್ತಿ ಸರ್ವಾಧಾರೆ ಗುಣಪೂರ್ಣೆ

ದಯದಿಂದ ನೋಡೆ ಭಜಿಪ ಭಕ್ತರ
ಭಯ ದೂರ ಮಾಡೆ
ದಯಪಾಲಿಸೆ ಮಾತೆ ತ್ರೈಲೋಕ್ಯ ವಿಖ್ಯಾತೆ
ಜಯದೇವಿ ಸುವ್ರತೆ ಜಗದೀಶನ ಪ್ರೀತೆ

ನೀನಲ್ಲದನ್ಯ ರಕ್ಷಿಪರನು
ಕಾಣೆ ನಾ ಮುನ್ನ
ದಾನವಾಂತಕ ಸಿರಿ ಪುರಂದರವಿಠಲನ
ಧ್ಯಾನಿಪ ಭಕುತರ ಮಾನ ನಿನ್ನದು ತಾಯೆ


1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪಾಪೋಸು ಹೋದುವಲ್ಲ ಸ್ವಾಮಿ

ಪಾಪೋಸು ಹೋದುವಲ್ಲ ಸ್ವಾಮಿ ಎನ್ನ
ಪಾಪೋಸು ಹೋದುವಲ್ಲ

ಅಪಾರ ದಿನಗಳಿಂದ ಅರ್ಜನೆ ಮಾಡಿದ

ಉರಗಾದ್ರಿಯಲಿ ಸ್ವಾಮಿಪುಷ್ಖರಣಿ ಮೊದಲಾದ
ಪರಿಪರಿ ತೀರ್ಥ ಸ್ನಾನಗಳ ಮಾಡಿ
ಹರಿದಾಸರ ಕೂಡಿ ಗಿರಿರಾಯನ ಮೂರ್ತಿ
ದರುಶನದಲ್ಲಿ ಮೈಮರೆತಿರಲು ಎನ್ನ

ಪರಮ ಭಾಗವತರ ಹರಿಕಥೆ ಕೇಳಲು
ಪರಮ ಭಕುತಿಯಿಂದ ಕೇಳುತಿರೆ
ಪರಮ ಪಾಪಿಗಳ ಪಾಲಾಗಿ ಪೋದುವು
ಪರಮ ಪುರುಷನ ಮನಸಿಗೆ ಬಂದೀಗ

ಮಾಯಾದೇವಿ ಎನಗೆ ಮೆಚ್ಚಿ ಕೊಟ್ಟಿದ್ದಳು
ದಾಯಾದಿಗಳು ನೋಡಿ ಸಹಿಸಲಿಲ್ಲ
ಮಾಯಾರಮಣ ನಮ್ಮ ಪುರಂದರವಿಠಲನ
ಮಾಯದಿಂದಲಿ ಮಟ್ಟಮಾಯವಾದವು ಎನ್ನ

ಪಾಪಿ ಬಲ್ಲನೆ ಪರರ ಸುಖ ದುಃಖವ

ಪಾಪಿ ಬಲ್ಲನೆ ಪರರ ಸುಖ ದುಃಖವ

ಕೋಪಿ ಬಲ್ಲನೆ ಶಾಂತ ಸುಗುಣದ ಘನವ
ಕತ್ತೆ ಬಲ್ಲುದೆ ಹೊತ್ತ ಕಸ್ತೂರಿಯ ಪರಿಮಳವ
ಮೃತ್ಯು ಬಲ್ಲುದೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲನು

ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲುದೆ ನೀರು ಸೌಳು ಸ್ವಾದೆಂಬುದನು
ತಾನು ಬಲ್ಲುದೆ ಹಾವು ಹಾಲನೆರೆದವರನು

ಬಾಳೆ ಬಲ್ಲುದೆ ಮರಳಿ ಫಲವಾಗೊ ಸುದ್ದಿಯನು
ಸೂಳೆ ಬಲ್ಲಳೆ ವಿಟನ ಬಡತನವನು
ಕೇಳಬಲ್ಲನೆ ಕಿವುಡನೇಕಾಂತ ಮಾತುಗಳ
ಹೇಳಬಲ್ಲನೆ ಮೂಕ ಕನಸು ಕಂಡುದನು

ಕಾಗೆ ಬಲ್ಲುದೆ ಒಳ್ಳೆ ಕೋಗಿಲೆಯ ಸುಸ್ವರವ
ಗೂಗೆ ಬಲ್ಲುದೆ ಹಗಲು ಹರಿದಾಟವ
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಷಡ್ರಸಾನ್ನರುಚಿಯ

ಕೋಡಗವು ಬಲ್ಲುದೆ ರತ್ನದಾಭರಣವನು
ಹೇಡಿ ಬಲ್ಲನೆ ರಣದ ಸಂಭ್ರಮವನು
ಬೇಡಿದ ವರಗಳ ಪುರಂದರವಿಠಲನಲ್ಲದೆ
ನಾಡಾಡಿ ದೈವಗಳು ಕೊಡಬಲ್ಲುವೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪವಡಿಸು ಪರಮಾತ್ಮನೆ ಸ್ವಾಮಿ

ಪವಡಿಸು ಪರಮಾತ್ಮನೆ ಸ್ವಾಮಿ

ಭವರೋಗ ವೈದ್ಯನೆ ಭಕ್ತರ ಪ್ರಿಯನೆ

ಕುಂದಣದಿ ರಚಿಸಿದ ಸೆಜ್ಜೆ ಮನೆಯಲ್ಲಿ
ಇಂದ್ರನೀಲಮಣಿ ಮಂಟಪದಿ
ಚಂದ್ರಕಾಂತಿಯ ಠಾಣದೀವಿಗೆ ಹೊಳೆಯಲು
ಸಿಂಧುತನಯೆ ಆನಂದದಿಂದ

ತೂಗುಮಂಚದಿ ಹಂಸತೂಲದ ಹಾಸಿಗೆ
ನಾಗಸಂಪಿಗೆ ಹೂವಿನ ಒರಗು
ಸಾಗರಸುತೆ ಸಮ್ಮೇಳದಲಿ ನಿಜ
ಭೋಗದಿಂದ ಓಲಾಡುತಲಿ

ಸದ್ದಡಗಿತು ಸಮಯ ಸಾಗಿತು ಬೀಗ
ಮುದ್ರೆಗಳಾಯಿತು ಬಾಗಿಲಿಗೆ
ತಿದ್ದಿದ ಛಾವಣಿ ಶಂಖದ ಫೋಷಣೆ
ಪದ್ಮನಾಭ ಶ್ರೀ ಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ಪರಾನ್ನವೇತಕೆ ಬಂತಯ್ಯ

ಪರಾನ್ನವೇತಕೆ ಬಂತಯ್ಯ ಎನಗೆ ಇಂದು
ಪರಾನ್ನವೇತಕೆ ಬಂತಯ್ಯ?

ಪರಾನ್ನವೇತಕೆ ಬಂತು ಪರಮೇಷ್ಟಿಜನಕನ
ಪರನೆಂದು ತಿಳಿಸದೆ ಪರಗತಿ ಕೆಡಿಸುವ

ಸ್ನಾನವ ಮಾಡಿಕೊಂಡು ಕುಳಿತು ಬಹು
ಮೌನದಿಂದಿರಲಿಸದು
ಶ್ರೀನಿವಾಸನ ಧ್ಯಾನಮಾಡದೆ ಮನವಿದು
ತಾನೆ ಓಡುವುದು ಶ್ವಾನನೋಪಾದಿಯಲಿ

ಜಪವ ಮಾಡುವ ಕಾಲದಿ ಕರೆಯ ಬರೆ
ವಿಪರೀತವಾಗುವುದು
ಸ್ವಪನದಂತೆ ಪೊಳೆದು ನನ್ನ ಮನಕೆ ಬಲು
ಸುಪಥವ ತಪ್ಪಿಸಿ ಅಪಗತಿ ಕೊಡುವಂಥ

ಪ್ರಸ್ಥದ ಮನೆಯೊಳಗೆ ಕರೆಯದೆ ಪೋಗಿ
ಸ್ವಸ್ಥದಿ ಕುಳಿತುಕೊಂಡು
ವಿಸ್ಥಾರವಾಗಿ ಹರಟೆಯನೆ ಬಡಿದು ಪ್ರ-
ಶಸ್ತವಾಯಿತು ಎಂದು ಮಸ್ತಕ ತಿರುವುವ

ಯಜಮಾನನು ಮಾಡಿದ ಪಾಪಂಗಳ
ವ್ರಜವು ಅನ್ನದೊಳಿರಲು
ದ್ವಿಜರು ಭುಂಜಿಸಲಾಗಿ ಅವರ ಉದರದೊಳು
ನಿಜವಾಗಿ ಸೇರುವುದು ಸುಜನರು ಲಾಲಿಸಿ

ಮಾಡಿದ ಮಹಾಪುಣ್ಯವ ಓದನಕಾಗಿ
ಕಾಡಿಗೊಪ್ಪಿಸಿಕೊಡುತ
ರೂಢಿಗಧಿಕನಾದ ಪುರಂದರವಿಠಲನ
ಪಾಡಿ ಪೊಗಳಿ ಕೊಂಡಾಡಿಕೊಂಡಿರದಂತೆ