ಅಂದಿನಿಂದ ನಾ ನಿನ್ನ ನೆರೆ ನಮ್ಬಿದೆನೋ ಕೃಷ್ಣ
ತಂದೆ ಗೋವಿಂದ ಮುಕುಂದ ನಂದನ ಕಂದ
ಬಲವಂತನುತ್ತಾನಪಾದರಾಯನ ಕಂದ
ಬಲತಾಯಿ ನೂಕಲು ಅಡವಿಯೊಳು
ಜಲಜಾಕ್ಷಿ ನಿನ್ನ ಕುರಿತು ತಪವಿರಲಾಗಿ
ಒಲಿದು ಧ್ರುವ ಪಟ್ಟ ಗಟ್ಟಿದ್ದು ಕೇಳಿ
ನಕ್ರಂಗೆ ಗಜರಾಜ ಸಿಕ್ಕು ಸರಸಿಯೊಳು
ದುಃಖದಿ ಶ್ರೀಹರಿಯೆ ಸಲಹೆನ್ನಲು
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ವಕ್ರವ ಪರಿದಾದಿಮೂಲನೆಂಬುದ ಕೇಳಿ
ದ್ರುಪದನ ಸುತೆಯ ದುಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ
ಸುಪರ್ಣವಾಹನ ಕೃಷ್ಣ ಸಲಹೆಂದ ಅಬಲೆಯ
ಅಪಮಾನದಿಂ ಕಾಯ್ದ ಶ್ರೀಹರಿಎಂಬುದ ಕೇಳಿ
ಹರಿನಾರಾಯಣನೆಂದು ಪ್ರಹ್ಲಾದ ಒರೆಯಲು
ದುರುಳ ದಾನವನವನೂಳು ಮುನಿದು
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ-
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ
ಅಂಬರೀಷಗೆ ದೂರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ
ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ
ಕಂಬು ಚಕ್ರಧರ ಹರಿಎಂಬುದ ಕೇಳಿ
ಛಲ ಬೇಡ ರಾಮನ ಲಲನೆಯ ಬಿಡೆಎಂದು
ತಲೆ ಹತ್ತರವಗೆ ಪೆಳಲು ತಮ್ಮನು
ಬಳಲಿಸಿ ಹೊರಡಿಸಲವ ನಿನ್ನ ಮೊರೆ ಹೋಗೆ
ಸಲೆ ವಿಭೀಷಣಗೆ ಲಂಕೆಯನ್ನಿತ್ತುದ ಕೇಳಿ
ಸುರ ನರ ನಾಗಲೋಕದ ಭಕ್ತ ಜನರನ್ನು
ಪೊರೆಯಲೋಸುಗ ವೈಕುಂಟದಿಂದ
ಸಿರಿಸಹಿತಲೆ ಬಂದು ಶೇಷಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು
1 comment:
Beautiful pictures with beautiful songs
Post a Comment