ಸಂಸಾರವೆಂಬಂಥ ಭಾಗ್ಯವಿರಲಿ
ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ
ತಂದೆ ನೀನೆ ಕೃಷ್ಣ ತಾಯಿ ಇಂದಿರೆದೇವಿ
ಪೊಂದಿದ ಅಣ್ಣನು ವನಜಸಂಭವನು
ಇಂದುಮುಖಿ ಸರಸ್ವತೀದೇವಿಯೇ ಅತ್ತಿಗೆಯು
ಎಂದೆಂದಿಗೂ ವಾಯುದೇವರೇ ಗುರುವು
ಭಾರತೀ ದೇವಿಯೇ ಗುರುಪತ್ನಿಯು ಎನಗೆ
ಗರುಡ ಶೇಷಾದಿಗಳೆ ಗುರುಪುತ್ರರು
ಹರಿದಾಸರೆಂಬುವರೆ ಇಷ್ಟ ಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು
ಸರುವಾಭಿಮಾನವನು ತ್ಯಜಿಸುವುದೆ ಸುಸ್ನಾನ
ಹರಿಯ ನಾಮವೆ ಇನ್ನು ಅಮೃತಪಾನ
ವರದ ಪುರಂದರವಿಠಲ ನಿನ್ನ ಪಾದ ಧ್ಯಾನ
ಕರುಣಿಸಿ ಅನವರತ ಕರ ಪಿಡಿದು ಕಾಯೊ
ಸಂದಿತಯ್ಯ ಪ್ರಾಯವು ಸಂದಿತಯ್ಯ
ಒಂದು ದಿನವು ಸುಖವು ಇಲ್ಲ ಕುಂದಿಹೋದೆ ಕಷ್ಟದಿಂದ
ಬಂಧನವನು ಬಿಡಿಸುತೆನ್ನ ತಂದೆ ನೀನೆ ರಕ್ಷಿಸಯ್ಯ
ತಂದೆಯುದರದಿ ಮೂರು ತಿಂಗಳು ಸಂದು ಹೋಯಿತು ತಿಳಿಯದೆ
ಬೆಂದೆ ನವಮಾಸದೊಳು ಗರ್ಭದಿ ನಿಂದು ತಾಯಿಯ ಗರ್ಭದೆ
ಕುಂದಿತಾಯುವು ಒಂದು ವರುಷ ಇಂದಿರೇಶನೆ ಕೇಳು ದುಃಖವ
ಬಂಧನದೊಳಗೆ ನಿಂದೆನನುದಿನ ಮುಂದೆ ಮೋಕ್ಷದ ಮಾರ್ಗ ಕಾಣದೆ
ಕತ್ತಲೆಯೊಳಿರಲಾರೆನೆನುತಲಿ ಹೊತ್ತೆ ಹರಕೆಯ ನಿನ್ನೊಳು
ನಿತ್ಯದಲಿ ಮಲಮೂತ್ರ ಬಾಲ್ಯದಿ ಹೊತ್ತುಗಳೆದೆನು ಎನ್ನೊಳು
ಮತ್ತೆ ಹದಿನಾರರ ಪ್ರಾಯದಿ ಉಕ್ಕಿ ನಡೆದೆನು ಧರೆಯೊಳು
ಹತ್ತಿ ಸಂಸಾರದ ಮಾಯೆಯು ಸಿಕ್ಕಿದೆನು ಭವಬಲೆಯೊಳು
ಎಡೆಬಿಡದೆ ಅನುದಿನದಿ ಪಾಪದ ಕಡಲೊಳಗೆ ನಾ ಬಿದ್ದೆನೋ
ದಡವ ಕಾಣದೆ ದುಃಖದೊಳು ಬೆಂದೊಡಲೊಳಗೆ ನಾ ನೊಂದೆನೋ
ಬಿಡದೆ ನಿನ್ನಯ ಧ್ಯಾನವೆಂಬಾ ಹಡಗವೇರಿಸು ಎಂದೆನೋ
ದೃಢದಿ ನಿನ್ನಯ ಪಾದ ಸೇರಿಸೊ ಒಡೆಯ ಪುರಂದರವಿಟ್ಠಲ
ಸಂತತಿಯಪ್ಪುದು ರಾಮಾಯಣವ ಕೇಳಲು
ಸಕಲ ಪಾಪಹರವು ಭಾರತ ಕೇಳಲು
ತಂತುಮಾತ್ರ ವಿಷ್ಣುಪುರಾಣವ ಕೇಳಲು
ತತ್ತ್ವವಿವೇಕವು ಬಾಹೋದು
ಅಂತವರಿತು ಭಾಗವತವ ಕೇಳಲು
ಆಹೋದೈ ಜ್ಞಾನಭಕ್ತಿ ವೈರಾಗ್ಯವು
ಸಂತತ ಪುರಂದರವಿಠಲನ ಸಂಕೀರ್ತನೆ ಪಾಡಲು
ಸಕಲವು ಬಾಹೋದು ಸಾಯುಜ್ಯವು
ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ
ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ
ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಸಿಸಲಾರೆ, ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿಯೋ
ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ನಿಂದು ನೊಂದೆನೊ ಗೋವಿಂದ
ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಯ್ಯ
ತನುವಿನಲಿ ಬಲವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ
ಹನುಮದೀಶ ಪುರಂದರವಿಟ್ಠಲನೆ ಕೈಯ ಪಿಡಿದು
1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
3. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
ಶ್ರೀನಿವಾಸ ಎನ್ನ ಬಿಟ್ಟು ನೀನಗಲದೆ
ಮನವೆಂಬೊ ಮಂಟಪ ತನುವೆಂಬೊ ಹಾಸುಮಂಚ
ಜ್ಞಾನವೆಂಬೊ ದಿವ್ಯ ದೀಪದ ಬೆಳಕಿಲಿ ಸನಕಾದಿ ವಂದ್ಯ ನೀ ಬೇಗ ಬಾರೊ
ಪಂಚದೈವರು ಯಾವಾಗಲು ಎನ್ನ ಹೊಂಚುಹಾಕಿ ನೋಡುತಾರೊ
ಕೊಂಚಗಾರರು ಆರು ಮಂದಿ ಅವರು ಹಿಂಚುಮುಂಚಿಲ್ಲದೆ ಎಳೆಯುತಾರೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ ಇನ್ನಾದರು ಎನ್ನ ಕೈಪಿಡಿಯೊ
ಘನಮಹಿಮ ಶ್ರೀಪುರಂದರವಿಠಲ ಮನ್ನಿಸಿ ಎನ್ನನು ಕಾಯ ಬೇಕೊ
1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
ಶ್ರೀಕಾಂತ ಎನಗಿಷ್ಟು ದಯಮಾಡೊ ತಂದೆ
ಏಕಾಂತದಲಿ ನಿನ್ನ ಭಜಿಸುವ ಭಾಗ್ಯ
ಧನದಾಸೆಗಾಗಿ ನಾ ಧನಿಕರ ಮನೆಗಳ
ಕೊನೆ ಬಾಗಿಲಲಿ ನಿಂದು ತೊಳಲಿ ಬಳಲಿದೆನೊ
ದೇಹಾಭಿಮಾನದಿಂದ ವಿಹಿತ ಧರ್ಮವ ತೊರೆದು
ಸ್ನೇಹಾನುಬದ್ಧನಾಗಿ ಸತಿಸುತರ ಪೊರೆದೆನೊ
ಏನಾದರೇನೆನ್ನ ಹೀನ ಗುಣಗಳನೆಲ್ಲ
ಮನ್ನಿಸಿ ಸಲಹೊ ಶ್ರೀ ಪುರಂದರವಿಠಲ
ಶೃಂಗಾರವಾಗಿಹುದು ಶ್ರೀಹರಿಯ ಮಂಚ
ಅಂಗನೆ ಮಹಲಕುಮಿಯರಸ ಮಲಗುವ ಮಂಚ
ಬಡಗಿ ಮುಟ್ಟದ ಮಂಚ ಕಡಲೊಳಿಹ ಮಂಚ
ಮೃಡನ ತೋಳಲಿ ಅಡಗಿರುವ ಮಂಚ
ಹೆಡೆಯುಳ್ಳ ಹೊಸಮಂಚ ಪೊಡವಿ ಪೊತ್ತಿಹ ಮಂಚ
ಕಡಲಶಯನ ಶ್ರೀರಂಗನ ಸಿರಿಮಂಚ
ಕಾಲಿಲ್ಲದೋಡುವ ಮಂಚ ಗಾಳಿನುಂಗುವ ಮಂಚ
ತೋಳು ಬಿಳುಪಿನ ಮಂಚ ವಿಷಮಂಚ
ಕಾಳಗದೊಳರ್ಜುನನ ಮುಕುಟ ಕೆಡಹಿದ ಮಂಚ
ಕೇಳು ಪರೀಕ್ಷಿತನ ಕೊಂದುದೀ ಮಂಚ
ಕಣ್ಣು ಕಿವಿಯಾದ ಮಂಚ ಬೆನ್ನು ಬಾಗಿದ ಮಂಚ
ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ
ಬಣ್ಣ ಬಿಳುಪಿನ ಮಂಚ ಹೊನ್ನ ಕಾದಿಹ ಮಂಚ
ಕನ್ನೆ ಮಹಾಲಕ್ಷ್ಮಿಯರಸನ ಮಂಚ
ಹಕ್ಕಿಗೆ ಹಗೆಯಾದ ಮಂಚ ರೊಕ್ಕ ಮುಟ್ಟದ ಮಂಚ
ರಕ್ಕಸರೆದೆ ತಲ್ಲಣಗೊಳಿಸುವ ಮಂಚ
ಸೊಕ್ಕು ಪಿಡಿದ ಮಂಚ ಫಕ್ಕನೆ ನುಂಗುವ ಮಂಚ
ಲಕ್ಕುಮಿರಮಣ ಶ್ರೀಹರಿಯ ಮಂಚ
ಅಂಕುಡೊಂಕಿನ ಮಂಚ ಅಕಲಂಕಮಹಿಮ ಮಂಚ
ಸಂಕರುಷಣನೆಂಬ ಸುಖದ ಮಂಚ
ಶಂಕರನ ಕೊರಳಿಗೆ ಪದಕವಾಗಿಹ ಮಂಚ
ವೆಂಕಟಪುರಂದರವಿಠಲರಾಯನ ಮಂಚ