ಕೃಷ್ಣ ಎನಬಾರದೆ

ನರಜನ್ಮ ಬಂದಾಗ ನಾಲಿಗೆ ಇರುವಾಗ
ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣ ಎನಬಾರದೆ

ಮಲಗೆದ್ದು ಮೈಮುರಿದು ಏಳುತಲೊಮ್ಮೆ 
ಕೃಷ್ಣ ಎನಬಾರದೆ 
ನಿತ್ಯ ಸುಳಿದಾಡುತ ಮನೆಯೊಳಗಾದರು ಒಮ್ಮೆ 
ಕೃಷ್ಣ ಎನಬಾರದೆ

ಸ್ನಾನ ಪಾನ ಜಪ ತಪಗಳ ಮಾಡುತ
ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ
ಕೃಷ್ಣ ಎನಬಾರದೆ

ಮೇರೆ ತಪ್ಪಿ ಮಾತನಾಡುವಗಲೊಮ್ಮೆ 
ಕೃಷ್ಣ ಎನಬಾರದೆ 
ದೊಡ್ಡ ದಾರಿಯ ನಡೆವಾಗ ಭಾರವ ಹೊರುವಾಗ 
ಕೃಷ್ಣ ಎನಬಾರದೆ 

ಗಂಧವ ಪೂಸಿ ತಾಂಬೂಲವ ಮೆಲುವಾಗ
ಕೃಷ್ಣ ಎನಬಾರದೆ ತನ್ನ 
ಮಂದಗಮನೆ ಕೂಡ ಸರಸವಾಡುತಲೊಮ್ಮೆ 
ಕೃಷ್ಣಎನಬಾರದೆ

ಪರಿಹಾಸ್ಯದ ಮಾತನಾಡುತಲೊಮ್ಮೆ
ಕೃಷ್ಣ ಎನಬಾರದೆ 
ಪರಿ ಪರಿ ಕೆಲಸದೊಳೊಂದು ಕೆಲಸವೆಂದು 
ಕೃಷ್ಣ ಎನಬಾರದೆ

ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ
ಕೃಷ್ಣ ಎನಬಾರದೆ 
ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ 
ಕೃಷ್ಣ ಎನಬಾರದೆ

ನೀಗದಾಲೋಚನೆ ರೋಗೋಪದ್ರವದಲೊಮ್ಮೆ
ಕೃಷ್ಣ ಎನಬಾರದೆ
ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ
ಕೃಷ್ಣ ಎನಬಾರದೆ

ದುರಿತರಾಶಿಗಳನು ತರಿದು ಬಿಸಾಡುವ
ಕೃಷ್ಣ ಎನಬಾರದೆ  
ಸದಾ ಗರುಡವಾಹನ ಸಿರಿಪುರಂದರ ವಿಠಲನ್ನೇ 
ಕೃಷ್ಣ ಎನಬಾರದೆ


ರಾಗ: ಸೌರಾಷ್ಟ್ರ – ಛಾಪು ತಾಳ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ