ಪರಾಕು ಮಾಡದೆ ಪರಾಂಬರಿಸಿ

ಪರಾಕು ಮಾಡದೆ ಪರಾಂಬರಿಸಿ ಎನ್ನ ಅ-
ಪರಾಧಂಗಳ ಕ್ಷಮಿಸೋ

ಧರಾರಮಣ ಫಣಿಧರಾಮರಾರ್ಚಿತ
ಸುರಾಧಿಪತಿ ವಿಧಿ ಹರಾದಿ ವಂದಿತ

ನರರೊಳಗೆ ಪಾಮರನು ನಾನಿಹ
ಪರಕೆ ಸಾಧನವರಿಯೆ ಶ್ರೀ ಹರಿಯೆ
ಶರಣು ಹೊಕ್ಕೆ ನಿನ್ನ ಚರಣ ಕಮಲಕೆ
ಕರುಣದಿಂದ ನಿನ್ನ ಸ್ಮರಣೆ ಎನಗಿತ್ತು

ಜಪವನರಿಯೆನು ತಪವನರಿಯೆನು
ಉಪವಾಸ ವ್ರತಗಳನರಿಯೆ ಶ್ರೀ ಹರಿಯೆ
ಕೃಪಾವಲೋಕನದಿ ಆ ಪಾಪಗಳನೆಲ್ಲ
ಅಪಹೃತವ ಮಾಡೊ ಅಪಾರ ಮಹಿಮನೆ

ಕರಿರಾಜನುದ್ಧರಿಸಿ ದ್ರೌಪದಿಯ
ಮೊರೆ ಲಾಲಿಸಿ ತರಳನಿಗೊಲಿದು ನೀ ಪೊರೆದೆ
ಸಿರಿಯರಸ ನಿನ್ನ ಸರಿ ಯಾರ ಕಾಣೆ
ಪುರಾರಿನುತ ಸಿರಿ ಪುರಂದರವಿಠಲ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ













ನೋಡುವುದೇ ಕಣ್ಣು ಕೇಳುವುದೇ ಕಿವಿ

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ

ಗಾಡಿಕಾರ ಶ್ರೀ ವೇಣುಗೋಪಾಲನ
ಕೂಡಿ ಕೊಂಡಾಡುವ ಸುಖದ ಸೊಬಗನು

ಪೊಂಗಳಲೂದುತ ಮೃಗಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜ ಜನಕ ಗೋಪಾಂಗನೇರೊಡನೆ ಬೆಳ-
ದಿಂಗಳೊಳಗೆ ಸುಳಿದಾಡೊ ರಂಗಯ್ಯನ

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಜಿಗಿಜಿಗಿದಾಡುವ
ತುಂಬಿ ಝೇಂಕರಿಸುವಂದದಿ ಝೇಂಕರಿಪನ

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಬಿಡಿಸಿಕೊಂಬನ
ಗರುಡಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನೋಡದಿರು ಪರಸ್ತ್ರೀಯರ

ನೋಡದಿರು ಪರಸ್ತ್ರೀಯರ
ನೋಡಿದರೆ ಕೇಡಹುದು ತಪ್ಪದಿದಕೋ

ನೋಡಿದರೆ ಸ್ತ್ರೀ ಹತ್ಯವು, ನುಡಿಸಿ ಮಾ-
ತಾಡಿದರೆ ಗೋಹತ್ಯವು
ಕಾಡಿದರೆ ಶಿಶುಹತ್ಯವು ಮೈ-
ಗೂಡಿದರೆ ಬ್ರಹ್ಮಹತ್ಯವು

ಎರಳೆಗಂಗಳರೊಲುಮೆಗೆ ಮರುಳಾಗಿ
ಬರಿದೆ ನೀ ಕೆಡಬೇಡವೊ
ದುರುಳ ಯಮಲೋಕದಲ್ಲಿ ಕರೆದೊಯ್ದು
ಉರಿಗಂಬ ಅಪ್ಪಿಸುವರೊ

ಮರುಳು ಮಾನವನೆ ಕೇಳೊ ಪರಸತಿಯ
ಉರಿಯೆಂದು ನೋಡು ನಿತ್ಯ
ವರದ ಪುರಂದರವಿಠಲನ ನೆನೆದರೆ
ಸ್ಥಿರವಾದ ಮುಕುತಿಯಹುದು

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ

ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ
ದಿವ್ಯಷಡುರಸಾನ್ನವನಿಟ್ಟೆನೊ

ಘಮಘಮಿಸುವ ಶಾಲ್ಯಾನ್ನ ಪಂಚಭಕ್ಷ್ಯ
ಅಮೃತಕೂಡಿದ ದಿವ್ಯ ಪರಮಾನ್ನವು
ರಮಾದೇವಿಯರು ಸ್ವಹಸ್ತದಿ ಮಾಡಿದ ಪಾಕ
ಭೂ ಮೊದಲಾದ ದೇವೇರ ಸಹಿತೌತಣ

ಅರವತ್ತು ಶಾಕ ಲವಣಶಾಕ ಮೊದಲಾದ
ಸರಸ ಮೊಸರು ಬುತ್ತಿ ಚಿತ್ರಾನ್ನವು
ಪರಮಮಂಗಳ ಅಪ್ಪಾವು ಅತಿರಸಗಳ
ಹರುಷದಿಂದಲಿ ಇಟ್ಟ ಹೊಸ ತುಪ್ಪವು

ಒಡೆಯಂಬೊಡೆ ದಧಿವಡೆಯು ತಿಂಥಿಣಿ
ಒಡೆಯ ಎಡೆಗೆ ಒಡನೆ ಬಡಿಸಿದೆ
ದೃಢವಾದ ಪದಾರ್ಥವನ್ನೆಲ್ಲ ಇಡಿಸಿದೆ
ಒಡೆಯ ಶ್ರೀ ಪುರಂದರವಿಠಲನೆ ಉಣ್ಣೊ

ನೆಚ್ಚನಯ್ಯ ಹರಿ ಮೆಚ್ಚನಯ್ಯ

ನೆಚ್ಚನಯ್ಯ ಹರಿ ಮೆಚ್ಚನಯ್ಯ

ಉತ್ತಮನೆಂದೆನಿಸಿಕೊಂಡು ಅರುಣೋದಯದ ಕಾಲದಲ್ಲಿ
ನಿತ್ಯ ಕಾಗೆಯ ಹಾಗೆ ನೀರೊಳಗೆ ಮುಳುಗುವವಗೆ

ತೊಗಲಿನ ದೇಹಕೆ ಗೋಪೀಗಂಧ ತೇದುಕೊಂಡು
ರೋಗ ಬಂದೆಮ್ಮೆಯಹಾಗೆ ಬರೆದುಕೊಂಬ ಮನುಜಗೆ

ಮರುಳುತನವು ಮಾತಿನಲ್ಲಿ ಹೃದಯದಲ್ಲಿ ವಿಷದ ಗುಟಿಕೆ
ಮರದ ಮೇಲಣ ಓತಿಯಂತೆ ನಮಿಸುವಂಥ ದುರುಳನಿಗೆ

ಹಣವಿಗೆ ಹಾರೈಸಿಕೊಂಡು ತಿರುಪತಿಗೆ ಹೋಹರ ಕಂಡು
ಹಣ ಕಾಸು ಕೊಂಡು ಬಂದು ಸ್ವಾಮಿಯ ನೋಡುವವಗೆ

ಬಾಯಿ ಬೀಗದಲ್ಲಿ ಹೋಯ್ದು ಹಾಲು ತುಪ್ಪಗಳನು ಸವಿದು
ಮೈಯು ಹುಳಿತ ನಾಯಿಯಂತೆ ಬೀದಿ ಬೀದಿ ತಿರುಗುವವಗೆ

ತಾನು ತನ್ನ ಮನೆಯ ಒಳಗೆ ದಾನ ಧರ್ಮಗಳನು ಕೊಡದೆ
ನೀನು ದಾನ ಮಾಡು ಎಂದು ಅನ್ಯರಿಗೆ ಹೇಳುವವಗೆ

ಏಕೋ ಭಾವ ಏಕೋಭಕ್ತಿ ಏಕೋಯುಕ್ತಿ ಏಕೋಮುಕ್ತಿ
ಬೇಕಾಗಿ ಪುರಂದರವಿಠಲನ್ನ ಭಜಿಸದವಗೆ

ನೀನ್ಯಾಕೋ ನಿನ್ನ ಹಂಗ್ಯಾಕೋ

ನೀನ್ಯಾಕೋ ನಿನ್ನ ಹಂಗ್ಯಾಕೋ
ನಿನ್ನ ನಾಮಾದ ಬಲವೊಂದಿದ್ದರೆ ಸಾಕೊ

ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ

ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮವೆ ಕಾಯ್ತೊ

ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೊ

ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲನೆಂಬ ನಾಮವೆ ಕಾಯ್ತೊ

ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ

ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಂಬ ನಾಮವೆ ಕಾಯ್ತೊ

ನಿನ್ನ ನಾಮಕೆ ಸರಿ ಯಾವುದು ಕಾಣೆನೊ
ಘನ್ನ ಮಹಿಮ ಸಿರಿ ಪುರಂದರವಿಠಲ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ

ನೀನೆ ದಯಾಳೊ ನಿರ್ಮಲಚಿತ್ತ ಗೋವಿಂದ
ನಿಗಮಗೋಚರ ಮುಕುಂದ

ಜ್ಞಾನಿಗಳರಸ ನೀನಲ್ಲದೆ ಜಗಕಿನ್ನು
ಮಾನದಿಂದಲಿ ಕಾವ ಧೊರೆಗಳ ನಾ ಕಾಣೆ

ದಾನವಾಂತಕ ದೀನಜನಮಂದಾರನೆ
ಧ್ಯಾನಿಪರ ಮನಸಂಚಾರನೆ
ಮೌನವಾದೆನು ನಿನ್ನ ಧ್ಯಾನಾನಂದದಿ ಈಗ
ಸಾನುರಾಗದಿ ಕಾಯೊ ಸನಕಾದಿವಂದ್ಯನೆ

ಬಗೆ ಬಗೆಯಲಿ ನಿನ್ನ ತುತಿಪೆನೊ ನಗಧರ
ಖಗಪತಿವಾಹನನೆ
ಮಗುವಿನ ಮಾತೆಂದು ನಗುತ ಕೇಳುತ ಬಂದೆ
ಬೇಗದಿಂದಲಿ ಕಾಯೊ ಸಾಗರಶಯನನೆ

ಮಂದರಧರ ಅರವಿಂದಲೋಚನ ನಿನ್ನ
ಕಂದನೆಂದೆಣಿಸೊ ಎನ್ನ
ಸಂದೇಹವೇಕಿನ್ನು ಸ್ವಾಮಿ ಮುಕುಂದನೆ
ಬಂದೆನ್ನ ಕಾಯೊ ಶ್ರೀಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ


ನೀನೆ ಅನಾಥಬಂಧು ಕಾರುಣ್ಯಸಿಂಧು

ನೀನೆ ಅನಾಥಬಂಧು ಕಾರುಣ್ಯಸಿಂಧು

ಮದಗಜವೆಲ್ಲ ಕೂಡಿದರೇನು ಅದರ ವ್ಯಾಳ್ಯಕೆ ಒದಗಲಿಲ್ಲ
ಮದನನಯ್ಯ ಮಧುಸೂದನ ಎನ್ನಲು
ಮುದದಿಂದಲಿ ಬಂದೊದಗಿದೆ ಕೃಷ್ಣಾ

ಪತಿಗಳೈವರಿದ್ದರೇನು ಸತಿಯ ಭಂಗ ಬಿಡಿಸಲಿಲ್ಲ
ಗತಿ ನೀನೇ ಮುಕುಂದ ಎನ್ನಲು
ಅತಿವೇಗದಿ ಅಕ್ಷಯವಿತ್ತೆ ಕೃಷ್ಣಾ

ಶಿಲೆಯ ರಕ್ಷಿಸಿ ಕುಲಕೆ ತಂದೆ
ಬಲಿಗೆ ಒಲಿದು ಪದವಿಯಿತ್ತೆ
ಸುಲಭದಿ ಭಕ್ತರ ಸಲುಹುವ ನಮ್ಮ
ಚೆಲುವ ಪುರಂದರವಿಟ್ಠಲರಾಯ

1. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

2. ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿಲ್ಲಬೇಕಯ್ಯ ಕೃಷ್ಣಯ್ಯ

ನಿಲ್ಲಬೇಕಯ್ಯ ಕೃಷ್ಣಯ್ಯ ನೀ

ನಿಲ್ಲಬೇಕಯ್ಯ ಮಲ್ಲಮರ್ದನ ಸಿರಿ
ವಲ್ಲಭ ಎನ್ನ ಹೃದಯದಲ್ಲಿ ಸತತ ನೀ

ಚುಪ್ಪಾಣಿ ಮುತ್ತಿಟ್ಟು ನೋಡುವೆ ನಿನ್ನ
ಚಪ್ಪಾಳಿ ತಟ್ಟಿ ನಾ ಪಾಡುವೆ
ಅಪ್ಪ ಶ್ರೀಕೃಷ್ಣ ನಿನ್ನೆತ್ತಿ ಮುದ್ದಿಸಿಕೊಂಬೆ
ಸರ್ಪಶಯನ ಕೃಪೆ ಮಾಡೆಂದು ಬೇಡುವೆ

ಚಂದದ ಹಾಸಿಗೆ ಹಾಸುವೆ ಪುನುಗು
ಗಂಧ ಕಸ್ತೂರಿಯ ಪೂಸುವೆ
ತಂದು ಮುದದಿ ಮುತ್ತಿನ ಹಾರ ಹಾಕುವೆ ಆ-
ನಂದದಿಂದಲಿ ನಿನ್ನ ಎತ್ತಿ ಮುದ್ದಿಸಿಕೊಂಬೆ

ನೀಲದ ಕಿರೀಟವನಿಡುವೆ ಬಲು
ಬಾಲಲೀಲೆಗಳ ಪಾಡುವೆ
ಚೆಲುವ ಶ್ರೀ ಪುರಂದರವಿಠಲರಾಯನೆ
ನಿಲ್ಲು ಎನ್ನ ಮನದಲ್ಲಿ ಒಂದೆ ಘಳಿಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ

ಸಮ್ಮತಿಂದ ನಾವು ನೀವು ಸಾಟಿ ಮಾಡಿ ನೋಡುವ

ಹೇಮ ಹೊನ್ನು ಹಣಗಳಿಗೆ ಹೇರಳ ಭಯಗಳುಂಟು
ರಾಮನಾಮ ದ್ರವ್ಯಕಿನ್ನು ಯಾರ ಭಯವಿಲ್ಲವಯ್ಯ

ಕಡಗ ಕಂಠಮಾಲೆಗಳಿಗೆ ಕಳ್ಳರ ಅಂಜಿಕೆಯುಂಟು
ಅಡವಿ ತುಳಸಿಮಾಲೆಗಿನ್ನು ಅರ ಅಂಜಿಕಿಲ್ಲವಯ್ಯ

ವ್ಯಾಪಾರ ಉದ್ಯೋಗಕಿನ್ನು ವ್ಯಾಕುಲದ ಭಯವುಂಟು
ಗೋಪಾಳದ ವೃತ್ತಿಗಿನ್ನು ಗೊಡವೆ ಯಾರದಿಲ್ಲವಯ್ಯ

ಸರಕು ಬೆಲ್ಲ ತುಪ್ಪ ಧಾನ್ಯ ಸವೆದೀತೆಂಬ ಚಿಂತೆಯುಂಟು
ಹರಿನಾಮಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯ

ನಿಮ್ಮ ಭಾಗ್ಯ ಲಕ್ಷ್ಮೀದೇವಿ ನಮ್ಮ ಭಾಗ್ಯ ನಾರಾಯಣನು
ನಮ್ಮ ನಿಮ್ಮ ಭಾಗ್ಯದೊಡೆಯ ಪುರಂದರವಿಠಲನು

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿನ್ನನೇ ನಂಬಿದೆನು ನೀನೆನ್ನ ಸಲಹಯ್ಯ

ನಿನ್ನನೇ ನಂಬಿದೆನು ನೀನೆನ್ನ ಸಲಹಯ್ಯ

ಎನ್ನ ಗುಣದೋಷಗಳನೆಣಿಸಬೇಡಯ್ಯ

ಬಾಲ್ಯದಲಿ ಕೆಲವು ದಿನ ಬರಿದೆ ಹೋಯಿತು ಹೊತ್ತು
ಮೇಲೆ ಯೌವನ ಮದದಿ ಮುಂದರಿಯದಿದ್ದೆ
ಜಾಲ ಸಂಸಾರದಲಿ ಸಿಲುಕಿ ಬಳಲಿದೆನಯ್ಯ
ಪಾಲಿಸೋ ಪರಮಾತ್ಮ ಭಕ್ತಿಯ ಕೊಟ್ಟು

ಆಸೆಯೆಂಬುದು ಅಜನ ಲೋಕವನು ಮುಟ್ಟುತಿದೆ
ಬೇಸರದು ಸ್ತ್ರೀಯರಲಿ ಬುದ್ಧಿಯೆನಗೆ
ವಾಸುದೇವನ ಸ್ಮರಣೆಯೊಮ್ಮೆಯಾದರು ಇಲ್ಲ
ಕ್ಲೇಶವನು ಬಿಡಿಸಿ ನಿನ್ನ ದಾಸನೆನಿಸಯ್ಯ

ಈ ತೆರದಿ ಕಾಲವನು ಇಂದಿರೇಶನೆ ಕಳೆದೆ
ಭೀತಿಯಿಲ್ಲದೆ ಜ್ಞಾನರಹಿತನಾಗಿ
ಮಾತೆ ತನ್ನಯ ಶಿಶುವ ಮನ್ನಿಸುವ ತೆರನಂತೆ
ದಾತ ಪುರಂದರವಿಠಲ ದಯಮಾಡಿ ಸಲಹೊ

ನಿನ್ನ ನೋಡಿ ಧನ್ಯನಾದೆನೊ

ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ

ನಿನ್ನ ನೋಡಿ ಧನ್ಯನಾದೆ ಎನ್ನ ಮನೋನಯನಕೀಗ-
ಇನ್ನು ದಯಮಾಡು ಸುಪ್ರಸನ್ನ ಸ್ವಾಮಿ ಪಾಂಡುರಂಗ

ಪಕ್ಷಿವಾಹನ ಲಕ್ಷ್ಮೀರಮಣ
ಲಕ್ಷ್ಮಿ ನಿನ್ನ ವಕ್ಷದಲ್ಲಿ
ರಕ್ಷ ಶಿಕ್ಷಣದಕ್ಷ ಪಾಂಡವ
ಪಕ್ಷ ರಕ್ಷ ಕಮಲಾಕ್ಷ

ದೇಶದೇಶ ತಿರುಗಿ ನಾನು
ಆಶಾಬದ್ಧನಾದೆ ಸ್ವಾಮಿ
ದಾಸನು ನಾನಲ್ಲವೆ ಜಗ-
ದೀಶ ಶ್ರೀಶ ಶ್ರೀನಿವಾಸ

ಕಂತುಜನಕ ಕೇಳೊ ನೀ ನಿ-
ರಂತರದಿ ನಿನ್ನ ಸೇವೆ
ಅಂತರಂಗದಿ ಪಾಲಿಸಯ್ಯ
ಹೊಂತಕಾರಿ ಪುರಂದರವಿಠಲ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಿನ್ನ ಆಶ್ರಯಿಸುವೆ ನಿಗಮಗೋಚರ

ನಿನ್ನ ಆಶ್ರಯಿಸುವೆ ನಿಗಮಗೋಚರ ನಿತ್ಯ
ಬೆನ್ನ ಬಿಡದೆ ಕಾಯೊ ಮನದಿಷ್ಟವೀಯೊ

ಕುಂದಣದ ಆಶ್ರಯ ನವರತ್ನಗಳಿಗೆಲ್ಲ
ಚಂದಿರನ ಆಶ್ರಯ ಚಕೋರಗೆ
ಕಂದರ್ಪನಾಶ್ರಯ ವಸಂತಕಾಲಕೆ, ಗೋ-
ವಿಂದನಾಶ್ರಯ ಮರಣಕಾಲದೊಳಗೆ

ಹಣ್ಣುಳ್ಳ ಮರಗಳು ಪಕ್ಷಿಗಳಿಗಾಶ್ರಯವು
ಪುಣ್ಯವುಳ್ಳ ನದಿಗಳು ಋಷಿಗಳಾಶ್ರಯವು
ಕಣ್ಣಿಲ್ಲದಾತಗೆ ಕೈಗೋಲಿನಾಶ್ರಯವು
ಎನ್ನಿಷ್ಟ ಪಡೆವರೆ ನಿನ್ನ ಆಶ್ರಯವು

ಪತಿವ್ರತೆ ವನಿತೆಗೆ ಪತಿಯೊಂದೆ ಆಶ್ರಯವು
ಯತಿಗನುಶ್ರುತ ಪ್ರಣವಾಶ್ರಯವು
ಮತಿಯುತ ನರಗೆ ಹರಿಸ್ತುತಿಗಳೇ ಆಶ್ರಯವು
ಹಿತವಾದ ಪುರಂದರವಿಠಲನಾಶ್ರಯವು

ನಾರಾಯಣ ನಿನ್ನ ನಾಮದ ಸ್ಮರಣೆಯ

ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ

ಕೂಡುವಾಗಲು ನಿಂತಾಡುವಾಗಲು ಮತ್ತೆ
ಹಾಡುವಾಗಲು ಹರಿದಾಡುವಾಗಲು
ಖೋಡಿ ವಿನೋದದಿ ನೋಡದೆ ನಾ ಬಲು
ಮಾಡಿದ ಪಾಪ ಬಿಟ್ಟೋಡಿ ಹೋಗೊ ಹಾಂಗೆ

ಊರಿಗೆ ಹೋಗಲಿ ಊರೊಳಗಿರಲಿ
ಕರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ನಿನ್ನನು
ಸಾರಿಸಾರಿಗೆ ನಾ ಬೇಸರದಹಾಂಗೆ

ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ
ಕಸವಿಸಿಯಿರಲಿ ಹರುಷವಿರಲಿ
ವಸುದೇವಾತ್ಮಜ ಶಿಶುಪಾಲಕ್ಷಯ
ಅಸುರಾಂತಕ ನಿನ್ನ ಹೆಸರು ಮರೆಯದಹಾಂಗೆ

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರು ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಮಂತ್ರದ ನಾಮದ

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣಕಮಲವನು
ಮನಸಿನೊಳಗೆ ಒಮ್ಮೆ ನೆನಸಿಕೊಳ್ಳುವ ಹಾಗೆ

ಜ್ವರ ಬಂದಾಗಲು ಚಳಿ ಬಂದಾಗಲು
ಮರಳಿ ಮರಳಿ ಮತ್ತೆ ನಡುಗುವಾಗ
ಹರಿನಾರಾಯಣ ದುರಿತನಿವಾರಣೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ

ಸಂತತ ಹರಿ ನಿನ್ನ ಸಾಸಿರನಾಮವ
ಅಂತರಂಗದಾ ಒಳಗಿರಿಸಿ
ಎಂತೋ ಪುರಂದರವಿಟ್ಠಲರಾಯನೆ
ಅಂತ್ಯಕಾಲದಲಿ ಚಿಂತಿಸೊ ಹಾಂಗೆ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಾರಾಯಣ ತೇ ನಮೋ ನಮೋ

ನಾರಾಯಣ ತೇ ನಮೋ ನಮೋ ಭವ
ನಾರದ ಸನ್ನುತ ನಮೋ ನಮೋ

ಮುರಹರ ನಗಧರ ಮುಕುಂದ ಮಾಧವ
ಗರುಡಗಮನ ಪಂಕಜನಾಭ
ಪರಮಪುರುಷ ಭವ ಭಂಜನ ಕೇಶವ
ನರಹರಿ ಶರೀರ ನಮೋ ನಮೋ

ಜಲಧಿ ಶಯನ ರವಿ ಚಂದ್ರ ವಿಲೋಚನ
ಜಲರುಹ ಭವನುತ ಚರಣ ಯುಗ
ಬಲಿಭಂಜನ ಗೋವರ್ಧನವಲ್ಲಭ
ನಳಿನೋದರ ತೇ ನಮೋ ನಮೋ

ಆದಿದೇವ ಸಕಲಾಗಮ ಪೂಜಿತ
ಯಾದವಕುಲ ಮೋಹನರೂಪ
ವೇದೋದ್ಧಾರ ಶ್ರೀ ವೇಂಕಟನಾಯಕ ಪು-
ರಂದರವಿಠಲ ತೇ ನಮೋ ನಮೋ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನಾರಾಯಣ ಗೋವಿಂದ ಹರಿಹರಿ

ನಾರಾಯಣ ಗೋವಿಂದ ಹರಿಹರಿ
ನಾರಾಯಣ ಗೋವಿಂದ

ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ

ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ

ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ

ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ

ದುರುಳ ಹಿರಣ್ಯನ ಕರುಳು ಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ

ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ

ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ

ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ

ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ

ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗಿಯಿಂದ

ಧರೆಯೊಳು ಪರಮನೀಚ ಸವರಲು ಕು-
ದುರೆಯನೇರಿದ ಕಲಿ ಚೆಂದ

ದೋಷದೂರ ಶ್ರೀಪುರಂದರವಿಠಲ
ಪೋಷಿಪ ಭಕ್ತರ ವೃಂದ

ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮಕೀರ್ತನೆ ಅನುದಿನ ಮಾಳ್ಪಗೆ ನರಕ ಭಯಗಳುಂಟೆ

ನಾಮವೊಂದೆ ಯಮನಾಳ್ಗಳನೊದೆದು,
                                      ಅಜಾಮಿಳನಿಗೆ ಸುಕ್ಷೇಮವಿತ್ತ ಹರಿ


ಕೇಸರಿಗಂಜದ ಮೃಗವುಂಟೆ ದಿ-
ನೇಶನಿಗಂಜದ ತಮವುಂಟೆ
ವಾಸುದೇವ ವೈಕುಂಠ ಜಗನ್ಮಯ
ಕೇಶವ ಕೃಷ್ಣಾ ಎಂದುಚ್ಚರಿಸುತ


ಕುಲಿಶಕ್ಕೆದುರಿಹ ಗಿರಿಯುಂಟೆ ಬಲು
ಪ್ರಳಯ ಬಂದಾಗ ಜೀವಿಪರುಂಟೆ
ಜಲಜನಾಭ ಗೋವಿಂದ ಜನಾರ್ದನ
ಕಲುಷಹರಣ ಕರಿರಾಜ ವರದನೆಂದು


ಗರುಡನಿಗಂಜದ ಫಣಿಯುಂಟೆ ದ-
ಳ್ಳುರಿಯಲಿ ಬೇಯದ ತೃಣವುಂಟೆ
ನರಹರಿ ನಾರಾಯಣ ದಾಮೋದರ
ಪುರಂದರವಿಠಲ ಎಂದುಚ್ಚರಿಸುತ

ನಾಚಿಕೆಪಡಬೇಡ ಮನದೊಳು

ನಾಚಿಕೆಪಡಬೇಡ ಮನದೊಳು
ಯೋಚಿಸಿ ಕೆಡಬೇಡ

ನಿಚ್ಚ ನೆನೆಯೊ ನಮ್ಮಚ್ಯುತನಾಮವ
ಮೆಚ್ಚಿ ಕೊಟ್ಟರೆ ಅಚ್ಯುತ ಪದವೀವ

ಹರಿಹರಿಯೆಂದೊದರೋ ಹತ್ತಿದ
ದುರಿತಗಳಿಗೆ ಬೆದರೋ
ವಾರಿಜಾಕ್ಷನ ವೈಕುಂಠಪುರವ
ಸೇರಿ ಸೇರಿ ನೀ ಕುಣಿಕುಣಿದಾಡೊ

ಆರ ಗೊಡವೆ ಏಕೋ ನರಕದ
ದಾರಿ ತಪ್ಪಿಸುವರೇನೋ
ನೀರಜಾಕ್ಷ ನಮ್ಮ ನಿರ್ಜರಪತಿಯಲಿ
ಸೇರಿ ಸೇರಿ ಮನ ನಲಿನಲಿದಾಡೊ

ಭಕ್ತಜನರ ಕೂಡೋ ಭವಭಯ
ಬತ್ತಿಪೋಪುದು ನೋಡೋ
ಮುಕ್ತಿದಾಯಕ ಶ್ರೀಪುರಂದರವಿಠಲನ
ಭಕ್ತಿಯಿಂದ ನೀ ಹಾಡಿ ಕೊಂಡಾಡೊ


ನಾ ನಿನ್ನ ಧ್ಯಾನದೊಳಿರಲು

ನಾ ನಿನ್ನ ಧ್ಯಾನದೊಳಿರಲು ಮಿಕ್ಕ
ಹೀನ ಮಾನವರೇನ ಮಾಡಬಲ್ಲರೋ ರಂಗ


ಮಚ್ಚರಿಸುವರೆಲ್ಲ ಕೂಡಿ ಮಾಡುವದೇನು
ಅಚ್ಯುತ ನಿನದೊಂದು ದಯೆಯಿರಲು
ವಾತ್ಸಲ್ಯ ಬಿಡದಿರು ನಿನ್ನ ನಂಬಿದೆ ದೇವ
ಕಿಚ್ಚಿಗೆ ಇರುವೆ ಮುತ್ತುವುದೆ ಕೇಳೆಲೋ ರಂಗ


ಧಾಳಿಲಿ ಕುದುರೆ ವೈಯಾರದಿ ಕುಣಿಯಲು
ಧೂಳು ರವಿಯ ಮೇಲೆ ಮುಸುಕುವುದೆ
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ
ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ ರಂಗ


ಕನ್ನಡಿಯೊಳಗಿನ ಗಂಟು ಕಂಡು ಕಳ್ಳ
ಕನ್ನವಿಕ್ಕಲವನ ವಶವಹುದೆ
ನಿನ್ನ ನಂಬಲು ಮುದ್ದು ಪುರಂದರವಿಠಲ
ಚಿನ್ನಕ್ಕೆ ಪುಟವಿಟ್ಟಂತೆ ಅಹುದು ರಂಗ

ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನರಸಿಂಹನ ಪಾದ ಭಜನೆಯ ಮಾಡೋ

ನರಸಿಂಹನ ಪಾದ ಭಜನೆಯ ಮಾಡೋ

ನರಸಿಂಹನ ಪಾದ ಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಶದಂತೆ

ತರಳನ ಮೊರೆ ಕೇಳಿ ತವಕದಿಂದಲಿ ಬಂದು
ದುರುಳನ ಕರುಳ ತನ್ನ ಕೊರಳಲಿ ಧರಿಸಿದ

ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಭದಿಂದ ಬಂದ ವೈಕುಂಠಪತಿ ನಮ್ಮ

ಹರವಿರಿಂಚಾದಿಗಳು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ನರನಾದ ಮೇಲೆ ಹರಿನಾಮ ಜಿಹ್ವೆಯೊಳಿರಬೇಕು

ಭೂತದಯಾಪರನಾಗಿರಬೇಕು
ಪಾತಕವೆಲ್ಲ ಕಳೆಯಲಿಬೇಕು
ಮಾತು ಮಾತಿಗೆ ಹರಿಯೆನ್ನಬೇಕು

ಆರುವರ್ಗವನಳಿಯಲಿಬೇಕು
ಮೂರು ಗುಣಂಗಳ ಮೀರಲಿಬೇಕು
ಸೇರಿ ಬ್ರಹ್ಮನೊಳಿರಬೇಕು

ಅಷ್ಟಮದಂಗಳ ತುಳಿಯಲಿಬೇಕು
ದುಷ್ಟರ ಸಂಗವ ಬಿಡಬೇಕು
ಕೃಷ್ಣ ಕೇಶವ ಎನ್ನಬೇಕು

ವೇದ ಶಾಸ್ತ್ರವನೋದಲಿಬೇಕು
ಭೇದ ಅಹಂಕಾರವ ನೀಗಲಿಬೇಕು
ಮಾಧವ ಸ್ಮರಣೆಯೊಳಿರಬೇಕು

ಶಾಂತಿ ಕ್ಷಮೆ ದಯೆ ಪಿಡಿಯಲಿಬೇಕು
ಭ್ರಾಂತಿ ಕ್ರೋಧವ ಕಳೆಯಲಿಬೇಕು
ಶಾಂತರ ಸಂಗದೊಳಿರಬೇಕು

ಗುರುವಿನ ಚರಣಕ್ಕೆರಗಲಿಬೇಕು
ತರಣೋಪಾಯವನರಿಯಲಿಬೇಕು
ವಿರಕ್ತ ಮಾರ್ಗದಲಿರಬೇಕು

ಬಂದದ್ದುಂಡು ಸುಖಿಸಲಿಬೇಕು
ನಿಂದಾಸ್ತುತಿಗಳ ತಾಳಲಿಬೇಕು
ತಂದೆ ಪುರಂದರವಿಠಲ ಎನಬೇಕು

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ

ನಂಬಿ ಕೆಟ್ಟವರಿಲ್ಲವೊ ರಂಗಯ್ಯನ
ನಂಬದೆ ಕೆಟ್ಟರೆ ಕೆಡಲಿ

ಅಂಬುಜನಾಭನ ಅಖಿಳ ಲೋಕೇಶನ
ಅಪ್ರಮೇಯನಾದ ಆದಿಪುರುಷನ

ಪಿತನ ತೊಡೆಯ ಮೇಲೆ ಧ್ರುವರಾಜ
ಹಿತದಿಂದ ಕುಳಿತಿರಲು
ಮತಿಹೀನಳಾದ ಸುರುಚಿದೇವಿ ನೂಕಲು
ಹಿತದಿ ಧ್ರುವಗೆ ಪಟ್ಟ ಕೊಟ್ಟ ಮುರಾರಿಯ

ವರ ಪ್ರಹ್ಲಾದನ ಪಿತನು ಬಾಧಿಸುತಿರೆ
ಹರಿ ನೀನೆ ಗತಿಯೆನಲು
ಪರಮ ಪ್ರೀತಿಯಿಂದ ತರಳನ ಪಾಲಿಸಿ
ದುರುಳ ಹಿರಣ್ಯಕಶ್ಯಪನ ಸೀಳಿದ ಧೊರೆಯ

ಕರಿರಾಜನ ಸಲಹಿ ಅಂಜದಿರೆಂದು ಆ-
ದರಿಸಿದವರು ಯಾರೋ
ಗರುಡಗಮನ ಶ್ರೀ ಪುರಂದರವಿಠಲನ
ಚರಣಕಮಲವನ್ನು ದೃಢದಿಂದ ನಂಬಿರೊ

ನಂಬದಿರು ಈ ದೇಹ ನಿತ್ಯವಲ್ಲ

ನಂಬದಿರು ಈ ದೇಹ ನಿತ್ಯವಲ್ಲ
ಅಂಬುಜಾಕ್ಷನ ಭಜಿಸಿ ಸುಖಿಯಾಗೊ ಮನವೆ

ಎಲುಬು ರಕ್ತ್ರ ಮಾಂಸಗಳು ಮೇಲೆ ಚರ್ಮದ ಹೊದಿಕೆ
ಒಳಗೆ ಮಲ ಮೂತ್ರ ಕ್ರಿಮಿರಾಶಿ ಇಹವು
ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು
ಬಲುಹು ದೇಹವ ನೆಚ್ಚಿ ಕೆಡಬೇಡ ಮನವೆ

ಸತಿ ಸುತರು ಹಿತರೆಂದು ಮತಿ ಮರೆತು ಮಮತೆಯಲಿ
ಅತಿಕಾಂಕ್ಷೆಯಿಂದ ದುರ್ವಿಷಯ ಬಲಿದು
ಸತತ ಲಕ್ಷ್ಮೀಪತಿಯ ಶರಣೆನ್ನದಿಹಪರದ
ಗತಿ ಶೂನ್ಯನಾಗಿ ನೀ ಕೆಡಬೇಡ ಮನವೆ

ಪರರ ನಿಂದಿಸದೆ ಪರ ವಧುಗಳನು ಬಯಸದೆ
ಗುರು ವಿಪ್ರ ಸೇವೆಯನು ಮಾಡು ಬಿಡದೆ
ಹರಿ ಸ್ತುತಿಯ ನೀ ಕೇಳು ಹರಿ ಕೀರ್ತನೆಯ ಪಾಡು
ಸಿರಿ ಪುರಂದರವಿಠಲನೊಲಿದು ಪಾಲಿಸುವ

ಧ್ಯಾನವು ಕೃತಯುಗದಲ್ಲಿ

ಧ್ಯಾನವು ಕೃತಯುಗದಲ್ಲಿ
ಯಜ್ಞಯಾಗವು ತ್ರೇತಾಯುಗದಲ್ಲಿ
ಅರ್ಚನೆ ದ್ವಾಪರದಲ್ಲಿ
ಕೀರ್ತನೆ ಮಾತ್ರದಿ ಕಲಿಯುಗದಲ್ಲಿ
ಮುಕುತಿಯನೀವ ಪುರಂದರವಿಠಲ

ಧರ್ಮವೇ ಜಯವೆಂಬ ದಿವ್ಯಮಂತ್ರ

ಧರ್ಮವೇ ಜಯವೆಂಬ ದಿವ್ಯಮಂತ್ರ

ಮರ್ಮವನರಿತು ಮಾಡಲಿಬೇಕು ತಂತ್ರ

ವಿಷವಿಕ್ಕಿದವಗೆ ಷಡ್ರಸವನುಣಿಸಲಿಬೇಕು
ದ್ವೇಷ ಮಾಡಿದವನ ಪೋಷಿಸಲಿಬೇಕು
ಪುಸಿ ಮಾಡಿ ಕೆಡಿಸುವನ ಹಾಡಿ ಹರಸಲಿಬೇಕು
ಮೋಸ ಮಾಡುವನ ಹೆಸರು ಮಗನಿಗಿಡಬೇಕು

ಹಿಂದೆ ನಿಂದಿಪರನ್ನು ವಂದಿಸುತಲಿರಬೇಕು
ಬಂಧನದೊಳಿಟ್ಟವರ ಬೆರೆಯಬೇಕು
ಕೊಂದ ವೈರಿಯ ಮನೆಗೆ ನಡೆದು ಹೋಗಲಿಬೇಕು
ಕುಂದೆಣಿಸುವವರ ಗೆಳೆತನ ಮಾಡಬೇಕು

ಕೊಂಡೊಯ್ದು ಬಡಿಯುವರ ಕೊಂಡಾಡುತಿರಬೇಕು
ಕಂಡು ಸಹಿಸದವರ ಕರೆಯಬೇಕು
ಪುಂಡರೀಕಾಕ್ಷ ಶ್ರೀಪುರಂದರವಿಟ್ಠಲನ
ಕೊಂಡಾಡಿ ತಾ ಧನ್ಯನಾಗಬೇಕು